

ಮೊಳಕಾಲ್ಮೂರು: ಲಾಕ್‌ಡೌನ್‌ನಿಂದ ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಕ್ರಮ ಸರಿಯಲ್ಲ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಸ್ ನಿಲ್ದಾಣದಲ್ಲಿ ಬುಧವಾರ ಲಾಕ್‌ಡೌನ್ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು.
ಮಹಾಮಾರಿ ಕರೊನಾದಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಇದರ ನಿಯಂತ್ರಣಕ್ಕೆ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಕ್ರಮಗಳಿಗೆ ಇಡೀ ದೇಶವೇ ಪಕ್ಷಾತೀತವಾಗಿ ಸಹಕರಿಸಿದೆ. ರಾಜ್ಯದಲ್ಲೂ ಸುಧಾರಣೆ ಹಂತದಲ್ಲಿರುವಾಗ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದು ಮತ್ತಷ್ಟು ಅನಾಹುತಕ್ಕೆ ಎಡೆಮಾಡಿದಂತಾಗಿದೆ ಎಂದರು.
ಸರ್ಕಾರ ಕೂಡಲೇ ಗ್ರಾಮೀಣ ಪ್ರದೇಶ ಪ್ರತಿ ಮನೆಗಳಿಗೂ ಅಗತ್ಯ ಮಾಸ್ಕ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಅಗತ್ಯ ಸೇವೆಗಳಿಗೆ ಸಮಯ ನಿಗದಿ ಪಡಿಸಿ ನಿರ್ಬಂಧವನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಪಂ ಸದಸ್ಯ ಡಾ.ಯೋಗೇಶ್ ಬಾಬು ಮಾತನಾಡಿ, ಕೂಲಿ ಅರಸಿ ಪಟ್ಟಣಗಳಿಗೆ ವಲಸೆ ಬಂದ ಕಾರ್ಮಿಕರು ಅನ್ನ, ವಸತಿಗಾಗಿ ಪರಿತಪಿಸುತ್ತಿದ್ದಾರೆ. ಊರು ಸೇರಲು ತಲೆ ಮೇಲೆ ಗಂಟುಮೂಟೆ ಹೊತ್ತು ಮಕ್ಕಳ ಸಮೇತ ಕಾಲುನಡಿಗೆಯಲ್ಲಿ ತೆರಳುತ್ತಿದ್ದಾರೆ. ಸರ್ಕಾರ ಇವರ ನೆರವಿಗೆ ಧಾವಿಸಿಲ್ಲ. ಕಾಂಗ್ರೆಸ್ ಪಕ್ಷ ಇದನ್ನು ಸಹಿಸುವುದಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ, ಮುಖಂಡರಾದ ಜಯ್ಯಣ್ಣ, ಭಕ್ತಪ್ರಹ್ಲಾದ, ಟಿ.ಎಸ್.ಪಾಲಯ್ಯ, ಆರ್.ವೀರೇಶ್, ಟಿ.ಕೆ.ಕಲೀಂ ಉಲ್ಲಾ, ಎಸ್.ಖಾದರ್, ಎ.ಕೆ.ಮಂಜುನಾಥ, ನಾಗರಾಜ್‌ಕಟ್ಟೆ, ವೆಂಕಟೇಶ್, ಜಗದೀಶ, ಅಬ್ದುಲ್ಲಾ, ಓಬಣ್ಣ, ಗೋಪಾಲ, ಮಂಜುನಾಥ, ವೈ.ನಾಗರಾಜ್, ಶಿವಲಿಂಗ, ತಿಪ್ಪೇಸ್ವಾಮಿ, ನಾಗೇಂದ್ರ ಇತರರಿದ್ದರು.