

ಕೆ.ಕೆಂಚಪ್ಪ ಮೊಳಕಾಲ್ಮೂರು: ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ 30 ಎಕರೆ ಜಮೀನು ಮಂಜೂರಾಗಿರುವುದು ಮೊಳಕಾಲ್ಮೂರು ರೇಷ್ಮೆ ಸೀರೆಗೆ ಮತ್ತಷ್ಟು ಹೊಳಪು ತಂದಿದೆ.
ಮೈಸೂರು ಮಹಾರಾಜರಿಗೆ ಮೊಳಕಾಲ್ಮೂರು ರೇಷ್ಮೆ ಸೀರೆ ಅಚ್ಚುಮೆಚ್ಚು. ಒಂದು ಕಾಲದಲ್ಲಿ 2 ಸಾವಿರ ಕುಣಿಮಗ್ಗಗಳಲ್ಲಿ ನೇಕಾರರು ಬಿಡುವು ಕೊಡದೆ ನೇಯ್ದರೂ ಬೇಡಿಕೆ ಮಾತ್ರ ಕಡಿಮೆ ಆಗುತ್ತಿರಲಿಲ್ಲ. ಮದುವೆ ಸೀಜನ್ ಬಂದರೆ ಮಾರಾಟ ಜೋರಿರುತ್ತಿತ್ತು.
ಪವರ್‌ಲೂಮ್‌ಗಳ ಹಾವಳಿ, ಬಹು ವಿನ್ಯಾಸ, ಫ್ಯಾಶನ್ ಸೀರೆಗಳು ಮಾರುಕಟ್ಟೆಗೆ ದಾಳಿ ಇಡುತ್ತಿದ್ದಂತೆ ಅಪ್ಪಟ ರೇಷ್ಮೆ ಸೀರೆಗೆ ದೊಡ್ಡ ಪೆಟ್ಟು ಬಿತ್ತು. ಕುಲಕಸುಬು ನಂಬಿದ್ದ ಸಾವಿರಾರು ನೇಕಾರರ ಬದುಕು ಸಂಕಷ್ಟಕ್ಕೆ ಸಿಲುಕಿತು.
ನೇಕಾರಿಕೆ ಕಸುಬಿನ ಬದಲು ಕಿರಾಣಿ ಅಂಗಡಿ, ಹೋಟೆಲ್ ಮತ್ತಿತರ ಕೆಲಸಗಳತ್ತ ಕಸುಬುದಾರರು ಮುಖ ಮಾಡಿದರು. ಇನ್ನು ಕೆಲವರು ದೂರದ ಪಟ್ಟಣ, ನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋದರು.
ಪ್ರಸ್ತುತ 280 ರಿಂದ 300 ಕುಣಿಮಗ್ಗ ನೇಕಾರರ ಸಂಖ್ಯೆ ಇರುವ ಅಂದಾಜಿದೆ. ಈಗ ಜವಳಿ ಪಾರ್ಕ್‌ನಿಂದ ಒಂದಿಷ್ಟು ನೇಕಾರರು ಮತ್ತು ಮಾರಾಟಗಾರರಿಗೆ ಶಾಶ್ವತ ಕೆಲಸ ಸಿಗುವ ಆಶಾಭಾವನೆ ಮೂಡಿದೆ.
ಕೊಂಡ್ಲಹಳ್ಳೀಲಿ 30 ಎಕರೆ ಜಮೀನು: ತಾಲೂಕಿನಲ್ಲಿ ಜವಳಿ ಪಾರ್ಕ್ ಆರಂಭಿಸಬೇಕು ಎನ್ನುವುದು 50 ವರ್ಷಗಳ ಬೇಡಿಕೆ. ಈ ಸಂಬಂಧ 30 ಎಕರೆ ನಿವೇಶನ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕಂದಾಯ ಮಂತ್ರಿ ಆರ್.ಅಶೋಕ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿ ಕೊಂಡ್ಲಹಳ್ಳಿ ಸಮೀಪದ ರಿ.ಸ.ನಂ: 29ರ ಸರ್ಕಾರದ 30 ಎಕರೆ ಜಮೀನನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಹೆಸರಿಗೆ ಮಂಜೂರು ಮಾಡಿದ್ದಾರೆ. ಇದರಿಂದ ಅಳಿವಿನಂಚಿನಲ್ಲಿದ್ದ ನೇಕಾರಿಕೆಗೆ ಹೊಸ ಹುರುಪು ಬಂದಂತಾಗಿದೆ.
ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವರು
ನೇಕಾರರು ಸ್ವಾವಲಂಬಿಯಾಗಿ ಕಸುಬು ಮುಂದುವರಿಸಬೇಕು ಎಂಬುದು ನನ್ನ ಆಸೆ. ಮೂಲಸೌಕರ್ಯದೊಂದಿಗೆ ಕುಣಿಮಗ್ಗದ ವ್ಯವಸ್ಥೆ ಕಲ್ಪಿಸುವ ಗುರಿ ಇದೆ. ಇದಕ್ಕೆ ಪೂರಕವಾಗಿ ಸಂಬಂಧಿತ ಸಚಿವರು ಮತ್ತು ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಶಿಘ್ರ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು.
ಡಾ.ಮಂಜುನಾಥ್, ಜವಳಿ ಉದ್ಯಮಿಗಳು
ರೇಷ್ಮೆ ಸೀರೆ ಎಂದಾಕ್ಷಣ ನೆನಪಾಗುವುದು ಮೊಳಕಾಲ್ಮೂರು. ನೂರು ವರ್ಷಗಳಿಂದ ನೇಕಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ತನ್ನದೇ ಆದ ಛಾಪು ಮೂಡಿಸಿದೆ. ಇಲ್ಲಿನ ಕುಟ್ಟ, ಬ್ರೌಕೆಟ್, ಲಾಟ್, ಜಕಾರ್ಡ್ ರೇಷ್ಮೆ ಸೀರೆಗಳು ರಾಜ್ಯ, ಹೊರ ರಾಜ್ಯಗಳಲ್ಲೂ ಹೆಸರುವಾಸಿ.
ಕಾಟನ್ ಮತ್ತು ರೇಷ್ಮೆ ಉದ್ಯಮದಿಂದ ಅಂದಾಜು 500 ಜನಕ್ಕೆ ಉದ್ಯೋಗ ದೊರಕುವ ಗುರಿ ಇದೆ.
ಎನ್.ಪಿ.ನೆಗಳೂರು, ಉಪನಿರ್ದೇಶಕ, ಜವಳಿ ಮತ್ತು ಕೈಮಗ್ಗ ಇಲಾಖೆ, ಚಿತ್ರದುರ್ಗ.