ಶ್ರಮವಿಲ್ಲದೆ ಸಮಗ್ರ ಬೆಳವಣಿಗೆ ಅಸಾಧ್ಯ

MLK karyagara.. Feb.. 12.
Published on

ಮೊಳಕಾಲ್ಮೂರು: ಉಳುವ ಯೋಗಿ ರೈತನಷ್ಟೇ ಶಿಕ್ಷಕರೂ ಶ್ರಮಿಸಿದಾಗ ಮಾತ್ರ ಮಕ್ಕಳ ಸಾರ್ವಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಾಪಂ ಇಒ ಪ್ರಕಾಶ್ ತಿಳಿಸಿದರು.

ಪಟ್ಟಣದ ಸರ್‌ಎಂವಿ ಶಾಲೆಯಲ್ಲಿ ಬುಧವಾರ ತಾಲೂಕು ಮಟ್ಟದ ಪ್ರೌಢಶಾಲಾ ಭಾಷ ವಿಷಯಗಳ ಶಿಕ್ಷಕರ ಪ್ರಗತಿ ಪರಿಶೀಲನೆ ಸಭೆ ಉದ್ಘಾಟಿಸಿ ಮಾತನಾಡಿದರು.

ರೈತ ಭೂಮಿ ಉಳುಮೆ ಮಾಡಿ ಫಸಲು ತೆಗೆಯುವಲ್ಲಿ ಎಷ್ಟೆಲ್ಲ ಕಷ್ಟ ಪಡುತ್ತಾನೋ ಅದೇ ರೀತಿ ಶಿಕ್ಷಕರೂ ಸಹ ಕಾಡು ಕಲ್ಲಿನಂತಹ ಮಕ್ಕಳನ್ನು ತಿದ್ದಿ ಶಿಲೆಯಾಗಿಸಲು ಪ್ರಯತ್ನಿಸಬೇಕು ಎಂದರು.

ಬಿಇಒ ಎಂ.ಸೋಮಶೇಖರ್ ಮಾತನಾಡಿ, ಬಾಳು ಬೆಳಕಾಗಿಸಲು ಶಿಕ್ಷಣ ಅವಶ್ಯ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ 40 ದಿನ ಮಾತ್ರ ಉಳಿದಿದೆ. ಶೈಕ್ಷಣಿಕವಾಗಿ ಹಿಂದುಳಿದ ಮೊಳಕಾಲ್ಮೂರಿನ ಫಲಿತಾಂಶ ಈ ಬಾರಿ ಪ್ರಥಮ ಸ್ಥಾನಕ್ಕೇರಬೇಕು. ಇದಕ್ಕಾಗಿ ಈಗಿಂದಲೇ ತಯಾರಿಸಿ ನಡೆಸಿ ಎಂದು ಶಿಕ್ಷಕರಿಗೆ ಸೂಚಿಸಿದರು.

ಇಸಿಒ ಓಂಕಾರಪ್ಪ, ಸಂಪನ್ಮೂಲ ಅಧಿಕಾರಿಗಳಾದ ಟಿ. ತಿಮ್ಮೇಶಪ್ಪ, ನಾಗರಾಜ್, ಶಕೀಲ್ ಅಹಮದ್, ಮುಜಾಮಿಲ್, ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.

ತಾಪಂ ಇಒ ಪ್ರಕಾಶ್ ಹೇಳಿಕೆ: ಪ್ರತಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ವ್ಯರ್ಥವಾಗುವ ನೀರಲ್ಲಿ ಕೈತೋಟ, ಕಡ್ಡಾಯ ಶೌಚ ಬಳಕೆ, ಸ್ವಚ್ಛತೆಗೆ ಆದ್ಯತೆ ನೀಡಿದರೆ ಮಕ್ಕಳ ಸಾರ್ವಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆ.

ಬಿಇಒ ಎಂ.ಸೋಮಶೇಖರ್ ಹೇಳಿಕೆ: 10 ವರ್ಷ ಒಂದೇ ಕಡೆ ಕರ್ತವ್ಯ ನಿರ್ವಹಿಸಿದ್ದ ಅನ್ಯ ತಾಲೂಕಿನ ಶಿಕ್ಷಕರು ಕಡ್ಡಾಯ ವರ್ಗಾವಣೆಯಿಂದ ಇಲ್ಲಿಗೆ ಬಂದ ಕಾರಣ ಶಿಕ್ಷಕರ ಕೊರತೆ ಸುಧಾರಣೆಯಾಗಿತ್ತು. ಈ ಪೈಕಿ 17 ಶಿಕ್ಷಕರು ರಾಜಕೀಯ ಪ್ರಭಾವ ಬಳಸಿಕೊಂಡು ಬೇರೆಡೆಗೆ ನಿಯೋಜನೆಗೊಂಡಿದ್ದಾರೆ. ಇದರಿಂದ ಖಾಲಿಯಾಗಿರುವ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ತುಂಬಲು ಬರುತ್ತಿಲ್ಲ. ಬಾಂಡ್ರಾವಿಯಂತ ಗಡಿ ಶಾಲೆಗೆ ವರ್ಗಾವಣೆಯಾಗಿದ್ದ ಬೆಂಗಳೂರಿನ ಹಿಂದಿ ಶಿಕ್ಷಕಿ ಮುಖ್ಯಮಂತ್ರಿ ಶಿಫಾರಸು ಪತ್ರ ತಂದು ಪುನಃ ಮೂಲ ಸ್ಥಳಕ್ಕೆ ನಿಯೋಜನೆಗೊಂಡಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net