ಶಾಲಾ ಕೊಠಡೀಲಿ ಚುನಾವಣೆ ಸಾಮಗ್ರಿ

MLK SAMAGREE 03
Published on

ಮೊಳಕಾಲ್ಮೂರು: ಲೋಕಸಭಾ ಚುನಾವಣೆ ವೇಳೆ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನ ಕೊಠಡಿಯಲ್ಲಿ ಇಟ್ಟಿದ್ದ ಚುನಾವಣೆ ಸಾಮಗ್ರಿಗಳು ವರ್ಷದಿಂದ ದೂಳು ತಿನ್ನುತ್ತಿದ್ದು, ಅಧಿಕಾರಿಗಳು ಮರೆತಿದ್ದಾರೆ.

ಕಳೆದ ವರ್ಷ ಮೇನಲ್ಲಿ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಬಳಸಿಕೊಂಡಿದ್ದ ತಾಲೂಕು ಆಡಳಿತ, ಮತದಾನದ ಸಾಮಗ್ರಿಗಳನ್ನು ಕೊಂಡೊಯ್ಯದೇ ಇಲ್ಲೇ ಬಿಟ್ಟಿದೆ.

ವಿದ್ಯುನ್ಮಾನ ಮತಯಂತ್ರದ ಚಿಕ್ಕ ಬ್ಯಾಟರಿ ಬಾಕ್ಸ್‌ಗಳು, ಕರಪತ್ರಗಳು, ಬ್ಯಾಲೆಟ್ ಪೇಪರ್ ಇತ್ಯಾದಿ ಸಾಮಗ್ರಿಗಳು ವರ್ಷದಿಂದ ದೂಳು ತಿನ್ನುತ್ತಿವೆ.

ಜೂ.18ರಂದು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಕೊಠಡಿ ಅಗತ್ಯತೆ ಇದೆ. ಸಾಮಗ್ರಿಗಳು ತುರ್ತಾಗಿ ತೆರವು ಮಾಡಬೇಕಾಗಿದೆ. ವಿದ್ಯುನ್ಮಾನ ಯಂತ್ರಗಳನ್ನ ಕೊಂಡೊಯ್ಯುವಾಗ ಲಾರಿ ಚಾಲಕನ ನಿರ್ಲಕ್ಷೃದಿಂದ ಕಾಲೇಜಿನ ದ್ವಾರ ಬಾಗಿಲು ಕುಸಿದಿದೆ. ಪುನರ್ ನಿರ್ಮಾಣ ಮಾಡಿಸಿಕೊಡಿ ಎಂದು ತಾಲೂಕು ಆಡಳಿತಕ್ಕೆ ಕಾಲೇಜ್ ಸಿಬ್ಬಂದಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದ ಕಾಲೇಜಿಗೆ ಭದ್ರತೆ ಇಲ್ಲದೆ ರಾತ್ರಿ ಸಮಯದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಚುನಾವಣೆ ಸಮಯದಲ್ಲಿ ಹಗಲು ರಾತ್ರಿ ಬಳಸಿದ ವಿದ್ಯುತ್ ಬಿಲ್ ಸಹಿತ ಪಾವತಿ ಮಾಡಿಲ್ಲ ಎಂಬುದು ಕಾಲೇಜ್ ಸಿಬ್ಬಂದಿ ಅಳಲು.

ಎಂ.ಬಸವರಾಜ್ ತಹಸೀಲ್ದಾರ್

ಕಾಲೇಜು ಕೊಠಡಿಯಲ್ಲಿ ಚುನಾವಣೆ ಸಾಮಗ್ರಿಗಳು ಇರುವ ಬಗ್ಗೆ ಗೊತ್ತಾಗಿದೆ. ತಕ್ಷಣ ತೆರವು ಮಾಡಿಸಲಾಗುವುದು. ಕಾಲೇಜಿನ ನಾಮಫಲಕ ಕೆಡವಿರುವ ಬಗ್ಗೆ ಮಾಹಿತಿ ಇಲ್ಲ. ಮನವಿ ಕೊಟ್ಟರೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು.

ಮತದಾನ ಸಾಮಗ್ರಿ ಇರುವ ಬಗ್ಗೆ ಅನೇಕ ಬಾರಿ ತಹಸೀಲ್ದಾರರಿಗೆ ಪತ್ರ ಬರೆಯಲಾಗಿತ್ತು. ಆದರೆ, ಈ ವರೆಗೆ ಕ್ರಮ ಕೈಗೊಂಡಿಲ್ಲ.
ಬಿ.ಎನ್.ತಿಪ್ಪೇಸ್ವಾಮಿ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net