

ಮೊಳಕಾಲ್ಮೂರು: ಹಳ್ಳಿಗರು ಮನಸು ಮಾಡಿದರೆ ಸಮೃದ್ಧ ಹಸಿರು ನಾಡು ಕಟ್ಟುವುದು ದೊಡ್ಡ ವಿಷಯವೇನಲ್ಲ ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಡಾ.ಸದಾಶಿವ ಹೇಳಿದರು.
ತೋಟಗಾರಿಕೆ ಇಲಾಖೆಯಿಂದ ತಾಲೂಕಿನ ಕಾಟನಾಯಕನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಹಾಗೂ ಗ್ರಾಮೀಣ ಜನರು ಅರಣ್ಯೀಕರಣಕ್ಕೆ ಉತ್ತೇಜನ ನೀಡಬೇಕು. ಈ ಕಾರಣಕ್ಕೆ ಇಲಾಖೆಯಿಂದ ತೇಗ, ಸಿಲ್ವರ್, ಸೀಬೆ, ಹೆಬ್ಬೇವು, ನುಗ್ಗೆ, ಕರಿಬೇವು, ಸೀತಾಫಲ, ಹೊಂಗೆ ಇತ್ಯಾದಿ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಸಸಿ ವಿತರಣೆ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 2100 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕೃಷಿ ಕೈಗೊಳ್ಳುವ ಗುರಿ ಇದೆ. ಇದಕ್ಕಾಗಿ ತಳುಕಿನ ಸಸ್ಯಕ್ಷೇತ್ರದಲ್ಲಿ 2.20 ಲಕ್ಷ ಸಸಿಗಳನ್ನು ಬೆಳಸಲಾಗಿದೆ. ಒಬ್ಬ ರೈತ ಒಂದು ಹೆಕ್ಟೇರ್‌ನಲ್ಲಿ ಗರಿಷ್ಠ 100 ಸಸಿಗಳನ್ನು ನೆಡಲು ಅವಕಾಶವಿದೆ ಎಂದು ತಿಳಿಸಿದರು.
ಕೃಷಿ ಅಧಿಕಾರಿ ಡಾ.ಜೆ.ಅಶೋಕ್ ಮಾತನಾಡಿ, ಇಂದು ಅರಣ್ಯ ನಾಶ ಹೆಚ್ಚುತ್ತಿದೆ. ಇದರಿಂದ ಮಳೆ, ಬೆಳೆ ಇಲ್ಲದೆ ಜನ ಜಾನುವಾರುಗಳ ಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಇದಕ್ಕೆ ಮನುಷ್ಯನ ಅವೈಜ್ಞಾನಿಕ ನಡವಳಿಕೆಯೇ ಕಾರಣವಾಗಿದೆ ಎಂದರು.
ತೋಟಗಾರಿಕೆ ಹಿರಿಯ ನಿರ್ದೇಶಕ ವಿಶ್ವನಾಥ್, ಕೃಷಿ ಉಪ ನಿರ್ದೇಶಕ ಬಿ.ಎನ್.ಪ್ರಭಾಕರ, ಹಾನಗಲ್ ಗ್ರಾಪಂ ಅಧ್ಯಕ್ಷ ಶಿವಣ್ಣ ಸದಸ್ಯರಾದ ತಿಪ್ಪೇರುದ್ರಪ್ಪ, ಆಂಜನೇಯ ಇದ್ದರು.