ಸೂರಿಗಾಗಿ ಸಮರ ಕಾಲ್ನಡಿಗೆ ಜಾಥಾ

MLK SAMARA 08
Published on

ಮೊಳಕಾಲ್ಮೂರು: ಹಿಂದುಳಿದ ಸಮುದಾಯಗಳಿಗೆ ನಿವೇಶನ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವ ವಿಚಾರದಲ್ಲಿ ಸರ್ಕಾರ ಬದ್ಧತೆ ತೋರಬೇಕಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಸಿಪಿಐ ಒಕ್ಕೂಟ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೂರಿಗಾಗಿ ಸಮರ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದರು.

ಎಲ್ಲ ಸರ್ಕಾರಗಳು ಕಳೆದ 60 ವರ್ಷದಿಂದಲೂ ದಲಿತ, ನಿರ್ಗತಿಕ ಹಾಗೂ ಶೋಷಿತ ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕಾಗಿ ಬಳಸಿಕೊಂಡಿವೆಯೇ ಹೊರತು ಯಾವುದೇ ಸೌಲಭ್ಯ ಕಲ್ಪಿಸಿಲ್ಲ. 37 ಲಕ್ಷ ಬಡ ಕುಟುಂಬಗಳಿಗೆ ಸ್ವಂತ ಮನೆ ಇಲ್ಲದಿರುವುದು ಇದಕ್ಕೆ ಸೂಕ್ತ ನಿದರ್ಶನ ಎಂದರು.

ಈ ಹಿಂದೆ ಕಾರ್ಮಿಕ ಸಂಘಟನೆಗಳು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಎಂ ಯಡಿಯೂರಪ್ಪ ನಮಗೆ ನ್ಯಾಯ ಒದಗಿಸಿಕೊಡುತ್ತಾರೆಂಬ ಭರವಸೆಯೊಂದಿಗೆ ಸೂರಿಗಾಗಿ ಸಮರ ಎಂಬ ಘೋಷಣೆಯೊಂದಿಗೆ ಫೆ.2ರಂದು ಬಳ್ಳಾರಿಯಿಂದ ಜಾಥಾ ಆರಂಭಿಸಿದ್ದೇವೆ ಎಂದು ತಿಳಿಸಿದರು.

ಮೊಳಕಾಲ್ಮೂರು, ಕೂಡ್ಲಿಗಿ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ತುಮಕೂರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜಾಥಾವು ಮಾ.31ಕ್ಕೆ ಬೆಂಗಳೂರಿನ ಪ್ರೀಡಂ ಪಾರ್ಕ್ ತಲುಪಲಿದ್ದು, ಅಂದು ಅಲ್ಲಿ ಬಹಿರಂಗ ಸಭೆ ನಡೆಸಿ ಸರ್ಕಾರದ ಕಣ್ಣು ತೆರೆಸಲಾಗುವುದು ಎಂದರು.

ಕಿಸಾನ್ ಸಂಘಟನೆ ರಾಜ್ಯ ಕಾರ್ಯದರ್ಶಿ ಪ್ರಸನ್ನಕುಮಾರ ಮಾತನಾಡಿ, ಹಿಂದುಳಿದ ಸಮುದಾಯಗಳ ಪ್ರಗತಿಗಾಗಿ ಪ್ರತಿ ವರ್ಷದ ಬಜೆಟ್‌ನಲ್ಲಿ ಮೀಸಲಿರಿಸುವ ಹಣ, ಸೌಲಭ್ಯಗಳಾವೂ ಅರ್ಹರಿಗೆ ಸಿಗುತ್ತಿಲ್ಲ. ಹೀಗಾಗಿಯೇ ಗ್ರಾಮೀಣ ಪ್ರದೇಶದಲ್ಲಿ ಅನೇಕರಿಗೆ ಸೂರಿಲ್ಲ. ದುಡಿಯಲು ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಇಂತವರಿಗೆ ನ್ಯಾಯ ಒದಗಿಸುವುದು ನಮ್ಮೆಲ್ಲ ಧ್ಯೇಯವಾಗಬೇಕು ಎಂದು ತಿಳಿಸಿದರು.

ನಿವೇಶನ ಮತ್ತು ವಸತಿ ಸೌಲಭ್ಯದ ರಾಜ್ಯ ಮಂಡಳಿ ಅಧ್ಯಕ್ಷ ಎಂ.ಸಿ.ಡೋಂಗ್ರೆ, ಡಿ.ಪೆನ್ನಯ್ಯ, ಯೂತ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ್, ಎವೈಎಫ್ ರಾಜ್ಯ ಉಪಾಧ್ಯಕ್ಷ ಮಾನಪ್ಪ, ಜಾಫರ್, ಜ್ಯೋತಿ, ದೊಡ್ಡುಳ್ಳಾರ್ತಿ ಕರಿಯಣ್ಣ, ಶಿವರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net