

ಮೊಳಕಾಲ್ಮೂರು: ಲಾಕ್‌ಡೌನ್‌ನಿಂದ ಸ್ಥಗಿತವಾದ ಸಾಮಾಜಿಕ ಪಿಂಚಣಿ, ಅಸಂಘಟಿತ ಕಾರ್ಮಿಕ ಸರ್ಕಾರ ಘೋಷಿಸಿರುವ ಧನಸಹಾಯವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಎದುರು ಪ್ರತಿಭಟಿಸಿ, ಶಿರಸ್ತೇದಾರ್‌ಗೆ ಮನವಿ ಸಲ್ಲಿಸಿದರು. ಕರೊನಾ ಸಂಕಷ್ಟದಿಂದ ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದೆ ಬಡವರ ಬದುಕು ದುಸ್ಥಿತಿಯತ್ತ ಸಾಗಿದೆ.
ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಿಕ ಪ್ರೋತ್ಸಾಹ ಹಣ ನಂಬಿಕೊಂಡವರ ಕಥೆಯಂತೂ ಹೇಳತೀರದಾಗಿದೆ. ಕಳೆದ 2-3 ತಿಂಗಳಿಂದ ದುಡ್ಡಿಗಾಗಿ ಬ್ಯಾಂಕ್, ಅಂಚೆ ಕಚೇರಿಗಳಿಗೆ ಅಲೆಯುವುದು ತಪ್ಪಿಲ್ಲ ಎಂದು ದೂರಿದರು.
ಇದರಿಂದ ವಯೋವೃದ್ಧರು, ಅನಾರೋಗ್ಯಕ್ಕೆ ತುತ್ತಾದವರು ಔಷಧ, ಮಾತ್ರೆ ಖರೀದಿಗೆ ಹಣವಿಲ್ಲದೆ ಬೇರೆಯವರನ್ನು ಬೇಡುವ ಸ್ಥಿತಿ ಬಂದೊದಗಿದೆ. ಸರ್ಕಾರ ಕೂಡಲೇ ಅವರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ತಾಲೂಕು ಕಾರ್ಯದರ್ಶಿ ಜಾಫರ್, ಕಾರ್ಯಕರ್ತರಾದ ಕಾಮಯ್ಯ, ಭೀಮಣ್ಣ, ಅಂಜನ್‌ಕುಮಾರ್, ಬೋರಯ್ಯ, ತಿಪ್ಪೇಸ್ವಾಮಿ, ಮೂರ್ತಿ, ಮಹಾದೇವಿ, ಯಲ್ಲಪ್ಪ, ದುರುಗೇಶಿ ಮುಂತಾದವರು ಇದ್ದರು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ದೊರೆಯುತ್ತಿಲ್ಲ. ಈ ಬಗ್ಗೆ ಜಿಲ್ಲಾ, ತಾಲೂಕು ಮಟ್ಟದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಕ್ತ ನಿರ್ದೇಶನ ನೀಡಿ ಮಕ್ಕಳ ಶಿಕ್ಷಣದ ಪ್ರಗತಿಗೆ ಒತ್ತುಕೊಡಬೇಕು.
ಜಾಫರ್, ತಾಲೂಕು ಕಾರ್ಯದರ್ಶಿ, ಸಿಪಿಐ.