

ಮೊಳಕಾಲ್ಮೂರು: ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸ್ವ-ಉದ್ಯೋಗ, ವೃತ್ತಿಶಿಕ್ಷಣ ತರಬೇತಿ ಕೌಶಲತೆ ಮೇಳದಲ್ಲಿ ವಿದ್ಯಾರ್ಥಿನಿಯರು ತಯಾರಿಸಿದ ವಿವಿಧ ಮಾದರಿಯ ಸಿದ್ಧ ಉಡುಪು, ಕರಕುಶಲ ವಸ್ತುಗಳು ಜನರ ಗಮನ ಸೆಳೆದವು.
ಮುಖ್ಯ ಶಿಕ್ಷಕ ಎಚ್.ಯರ‌್ರಿಸ್ವಾಮಿ ಮಾತನಾಡಿ, ವಿದ್ಯಾರ್ಥಿನಿಯರು ಎರಡು ವರ್ಷಗಳ ಕಾಲ ನುರಿತ ಶಿಕ್ಷಕರಿಂದ ಕಲಿತ ಹೊಲಿಗೆ ತರಬೇತಿಯಿಂದ ಅವರ ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ ಎಂದರು.
ಚೆನ್ನಾಗಿ ಓದಿ ಸರ್ಕಾರಿ ನೌಕರಿ ಪಡೆಯುತ್ತೇನೆಂಬ ಹಂಬಲ ಸಹಜ. ಅದು ಸಾಧ್ಯವಾಗದಿದ್ದರೆ ಕೌಶಲ ತರಬೇತಿ ಪಡೆದು ಬದುಕು ರೂಪಿಸಿಕೊಳ್ಳುವುದು ಉತ್ತಮ ಕಾರ್ಯ ಎಂದು ತಿಳಿಸಿದರು.
ವೃತ್ತಿ ಶಿಕ್ಷಣ ತರಬೇತಿ ಶಿಕ್ಷಕಿ ಎನ್.ಕೆ.ತಿಪ್ಪಮ್ಮ ಮಾತನಾಡಿ, ಮಹಿಳೆಯರ ಭವಿಷ್ಯದ ಜೀವನಕ್ಕೆ ಶಿಕ್ಷಣ ಮತ್ತು ಸ್ವ-ಉದ್ಯೋಗ ಮಾರ್ಗವೇ ಭೂಷಣ. 8-9ನೇ ತರಗತಿ ಮಕ್ಕಳಿಗೆ ಓದಿನ ಜತೆ ಹೊಲಿಗೆ ತರಬೇತಿ ಕೌಶಲತೆ ಕಲಿಸುತ್ತಿದ್ದೇವೆ. 2012ರಿಂದ ಕಲಿತಿರುವ ಸಾವಿರಾರು ಮಕ್ಕಳ ಪೈಕಿ ಅನೇಕರು ಸ್ವಂತ ದುಡಿಮೆ ಕಂಡುಕೊಂಡಿದ್ದಾರೆ ಎಂದರು.
ಇದು ತಾಲೂಕಿನಲ್ಲೇ ಏಕೈಕ ವೃತ್ತಿಶಿಕ್ಷಣ ಶಾಲೆ. ಬಿ.ಜಿ.ಕೆರೆ, ದೇವಸಮುದ್ರ ಪ್ರೌಢಶಾಲೆಯಲ್ಲಿ ವೃತ್ತಿ ಶಿಕ್ಷಣ ಇದ್ದರೂ ಶಿಕ್ಷಕರ ಕೊರತೆಯಿಂದ ಅಲ್ಲಿನ ವಿದ್ಯಾರ್ಥಿನಿಯರು ವಂಚಿತರಾಗಿದ್ದಾರೆ. ಸರ್ಕಾರ ಮತ್ತು ಇಲಾಖೆ ಕಾಳಜಿ ತೋರಿ ಹಿಂದುಳಿದ ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿ ವೃತ್ತಿ ಶಿಕ್ಷಣ ಪ್ರಾರಂಭಿಸಿದರೆ ನೂರಾರು ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದು ವಿದ್ಯಾರ್ಥಿನಿಯರಾದ ಸಾನಿಯಾ, ತಿಪ್ಪಮ್ಮ, ವಿದ್ಯಾ ತಿಳಿಸಿದರು.