ಕ್ವಾರಂಟೈನ್‌ನಲ್ಲಿದ್ದ 66 ಮಂದಿ ಬಿಡುಗಡೆ

MLK bidugade.. may.. 25
Published on

ಮೊಳಕಾಲ್ಮೂರು: ತಾಲೂಕಿನ ಆದರ್ಶ ವಿದ್ಯಾಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದ 12ರಲ್ಲಿ 9 ಜನರ ವರದಿ ಫಲಿತಾಂಶ ನೆಗೆಟಿವ್ ಬಂದಿದ್ದರಿಂದ ಅವರನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.

ಚೆನ್ನೈ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣದಿಂದ 12 ಜನ ಬಂದಿದ್ದರು. ಇವರ ಗಂಟಲು ದ್ರವವನ್ನು ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಸಂಗ್ರಹಿಸಿ, ಪರೀಕ್ಷೆಗಾಗಿ ಕಳುಹಿಸಿಕೊಟ್ಟು, ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿತ್ತು. ಈ ಪೈಕಿ 9 ಮಂದಿಯ ವರದಿ ನೆಗಟಿವ್ ಬಂದಿದ್ದು, ಅವರನ್ನು ಬಿಡುಗಡೆ ಮಾಡಿ ಹೋಂ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ.

ಉಳಿದ ಮೂವರ ವರದಿಯೂ ನಗಟಿವ್ ಬಂದಿದ್ದು ಮಂಗಳವಾರ ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾವತಿ ಹೇಳಿದರು.

ಬಿಡುಗಡೆ ಸಂದರ್ಭದಲ್ಲಿ 9 ಮಂದಿಗೆ ಕೆಲವು ಸೂಚನೆ ನೀಡಿದ ವೈದ್ಯರು, 7 ದಿನಗಳ ಕಾಲ ಮನೆಯಿಂದ ಹೊರ ಬರಬಾರದು. ಪ್ರತ್ಯೇಕ ಕೊಠಡಿ, ಶೌಚಗೃಹ, ಬಾತ್‌ರೂಂ ಬಳಸಬೇಕು. ಯಾರನ್ನೂ ನೇರವಾಗಿ ಸಂಪರ್ಕ ಮಾಡಬಾರದು. ಅನಿವಾರ್ಯತೆ ಇದ್ದರೆ ಮಾಸ್ಕ್ ಧರಿಸಿಕೊಂಡು 2 ಮೀಟರ್ ಅಂತರದಲ್ಲಿ ಸಂವಹನ ಮಾಡುವುದು ಸೂಕ್ತ ಎಂದು ಸೂಚಿಸಿದರು.

ಜ್ವರ, ಕೆಮ್ಮು, ಶೀತ, ಗಂಟಲಿನ ಕೆರೆತ, ಭೇದಿ ಕಾಣಿಸಿಕೊಂಡರೆ ತಕ್ಕಣವೆ ವೈದ್ಯಾಧಿಕಾರಿಯನ್ನು ಸಂಪರ್ಕಿಸಬೇಕು. ಸಮಾರಂಭ, ಮದುವೆ, ಜನಸಂದಣಿ ಪ್ರದೇಶಗಳಿಗೆ ಮತ್ತಿತರ ಕಾರ್ಯಕ್ರಮಗಳಿಗೆ 7 ದಿನಗಳವರೆಗೆ ಹೋಗಬಾರದು ಎಂದು ಹೇಳಿದರು.

ಶಿರಸ್ತೇದಾರ್ ಜಿ.ಎಚ್.ಏಳುಕೋಟಿ, ತಾಪಂ ಸಹಾಯಕ ನಿರ್ದೇಶಕ ಸದಾಶಿವಪ್ಪ ತಗ್ಗಿ, ಪಿಎಸ್‌ಐ ಎಂ.ಕೆ.ಬಸವರಾಜು, ಆರ್‌ಐ ಉಮೇಶ್, ಜಿಲ್ಲಾ ಆರ್.ಆರ್. ತಂಡದ ಮೇಲ್ವಿಚಾರಕರಾದ ಶ್ರೀನಿವಾಸ್. ಒ.ವೈ.ತಿಪ್ಪೇಸ್ವಾಮಿ, ಸುಧಾ, ಅನಿಲ್ ಇತರರಿದ್ದರು.

ದ್ರವ ಆಹಾರ, ಪೌಷ್ಠಿಕ ಆಹಾರ ತೆಗೆದುಕೊಳ್ಳುವುದು ಸೂಕ್ತ. ನಿತ್ಯ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ತಾವು ಬಳಸುವ ವಸ್ತುಗಳನ್ನು ತಾವೇ ಶುಚಿಗೊಳಿಸಬೇಕು. ಆಗಾಗ ಸೋಪಿನಿಂದ ಕೈಗಳನ್ನು ತೊಳೆಯಬೇಕು. ಈ ಪದ್ಧತಿ ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು.
ಡಿ.ಚಿದಾನಂದಪ್ಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net