ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ್ಯದ ಬುನಾದಿ

MLK samalocana sabe.. jun. 15
Published on

ಮೊಳಕಾಲ್ಮೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಮಕ್ಕಳ ಭವಿಷ್ಯದ ಮೊದಲ ಮೆಟ್ಟಲು ಎಂದು ಬಿಇಒ ಎನ್.ಹನುಮಂತಪ್ಪ ತಿಳಿಸಿದರು.

ಪಟ್ಟಣದ ಸರ್‌ಎಂವಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ತಾಲೂಕಿನ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಸೋಮವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಪರೀಕ್ಷೆ ನಡೆಸಲಾಗುತ್ತದೆ. ಪಾಲಕರು ಕರೊನಾ ಆತಂಕ ಬಿಟ್ಟು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಸಂತಸದಿಂದ ಪರೀಕ್ಷೆಗೆ ಕಳಿಹಿಸಬೇಕು ಎಂದು ಮನವಿ ಮಾಡಿದರು.

ಜೂನ್ 25ರಿಂದ ಜುಲೈ 3ರ ವರೆಗೆ ತಾಲೂಕಿನ ಆಯ್ದ 7 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಶುದ್ಧ ಕುಡಿಯುವ ನೀರು, ಶೌಚಗೃಹ, ವಿದ್ಯುತ್, ಮೂಲಸೌಲಭ್ಯ ಕಲ್ಪಿಸಬೇಕು ಎಂದು ಮುಖ್ಯಶಿಕ್ಷಕರಿಗೆ ಸೂಚಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಕರೊನಾ ನಿಯಂತ್ರಣದ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ವಹಿಸಲಾಗಿದೆ. ತಾಲೂಕಿನ 2169 ವಿದ್ಯಾರ್ಥಿಗಳು ಹಾಗೂ ಬೇರೆ ಕಡೆ ವ್ಯಾಸಾಂಗ ಮಾಡುತ್ತಿರುವ 33 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.

ಒಂದು ಕೊಠಡಿಯಲ್ಲಿ 20 ಮಕ್ಕಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯವರು ವಿಧ್ಯಾರ್ಥಿಗಳಿಗೆಂದು 2500 ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಲಿದ್ದಾರೆ. ಪ್ರತಿ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಸರ್ ಬಳಕೆ ಹಾಗೂ ಆರೋಗ್ಯ ಸುರಕ್ಷತೆಗೆ ಪ್ಯಾರಾಮೆಡಿಕಲ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ನಿಗದಿತ ವೇಳೆಗೆ ಕರತರಲು ಖಾಸಗಿ ಶಾಲೆಗಳ 14 ಬಸ್‌ಗಳನ್ನ ಕಾಯ್ದಿರಿಸಲಾಗಿದೆ ಎಂದರು.

ಇಸಿಒಗಳಾದ ಎಚ್.ಜೆ.ಓಂಕಾರಪ್ಪ, ಎ.ಷಣ್ಮಖಪ್ಪ, ಸಿಆರ್‌ಪಿ ಬಿ.ಟಿ.ಓಂಕಾರಪ್ಪ, ಉಪ ಪ್ರಾಚಾರ್ಯ ಎಸ್.ಸುರೇಂದ್ರನಾಥ್, ಚಂದ್ರಶೇಖರ್, ಮುಖ್ಯಶಿಕ್ಷಕರಾದ ಎಂ.ಮಲ್ಲಿಕಾರ್ಜುನ, ಡಿ.ವಿ.ಕೃಷ್ಣಮೂರ್ತಿ, ಎಂ.ಸುಚಿತ್ರಾ, ಪಿ.ಎಂ.ಕಲ್ಲೇಶಪ್ಪ, ಲತೀಫ್ ಸಾಬ್, ಎನ್.ಪಾಪಯ್ಯ, ಸಿ.ಎಂ.ತಿಪ್ಪೇಸ್ವಾಮಿ, ಕೆ.ಮಹಾಂತೇಶ್, ನಯಿಮ್ ರಹಮಾನ್, ಈ.ವೆಂಕಟೇಶ್, ಸಣ್ಣಯಲ್ಲಪ್ಪ, ತಮ್ಮಣ್ಣ ಇತರರಿದ್ದರು.

ಪಿಯುಸಿ ಪರೀಕ್ಷೆಗೆ ಸಹಾಯವಾಣಿ: ಜೂನ್ 18ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಸಂಬಂಧಿಸಿದಂತೆ ಸಹಾಯವಾಣಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಪ್ರಾಂಶುಪಾಲರಾದ ಕೆ.ತಿಮ್ಮಯ್ಯ (9844486986), ಎಚ್.ಸುಗೇಂದ್ರ (9164392936), ವಿ.ಎಸ್.ಸಜ್ಜನ್ (9480397262) ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net