ಸಬ್ಸಿಡಿ ಬಿತ್ತನೆ ಬೀಜಕ್ಕೆ ಮೂರು ವರ್ಷ ಕತ್ತರಿ!

MLK Raita sabe 29
Published on

ಮೊಳಕಾಲ್ಮೂರು: ಸಬ್ಸಿಡಿ ದರದಲ್ಲಿ ಒಮ್ಮೆ ಬಿತ್ತನೆ ಬೀಜ ಖರೀದಿಸಿದ ರೈತರಿಗೆ ಮುಂದಿನ ಮೂರು ವರ್ಷಗಳವರೆಗೆ ಅದೇ ಬಿತ್ತನೆ ಬೀಜ ಅಥವಾ ತಳಿ ವಿತರಿಸುವಂತಿಲ್ಲ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವರ್ಷ ರೈತನೊಬ್ಬ ಶೇಂಗಾ ಬಿತ್ತನೆ ಬೀಜ ಖರೀದಿಸಿದರೆ ಮೂರು ವರ್ಷಗಳವರೆಗೆ ಆ ರೈತನಿಗೆ ಸಬ್ಸಿಡಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡುವಂತಿಲ್ಲ ಎಂಬುದು ಸುತ್ತೋಲೆಯ ಸಾರಾಂಶ.

ಇಲ್ಲಿನ ಕೃಷಿ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ರೈತ ಮುಖಂಡರ ಜತೆ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಕೃಷಿ ಅಧಿಕಾರಿ ಆರ್.ಅಶೋಕ್ ಈ ವಿಷಯ ಪ್ರಸ್ತಾಪಿಸಿದರು.

ಇಷ್ಟು ದಿನ ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾಗುತ್ತಿದ್ದ ಶೇಂಗಾ, ತೊಗರಿ, ಹಲಸಂದೆ, ಹೆಸರು, ಉದ್ದು, ಮೆಕ್ಕೆಜೋಳ, ರಾಗಿ, ಸಿರಿಧಾನ್ಯಗಳ ಬಿತ್ತನೆ ಬೀಜಗಳನ್ನು ಮೂರು ವರ್ಷಗಳಿಗೊಮ್ಮೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ನಿಯಮದ ಬಗ್ಗೆ ಕೃಷಿಕರು ಆತಂಕ ಪಡುವ ಅಗತ್ಯವಿಲ್ಲ. ಒಮ್ಮೆ ಬಿತ್ತನೆ ಮಾಡಿದ ಬೀಜದಲ್ಲೇ ಮೂರು ವರ್ಷದವರೆಗೆ ರೈತರೇ ಬೀಜೋತ್ಪಾದನೆ ಮಾಡಿಕೊಳ್ಳಲು ಯೋಗ್ಯವಾಗಿರುತ್ತದೆ. ಕೃಷಿಕರ ಆರ್ಥಿಕ ಹೊರೆ ಕೂಡ ತಪ್ಪಲಿದೆ ಎಂದು ವಿವರಿಸಿದರು.

ರೈತ ಮುಖಂಡರಾದ ಬೆಳಗಲ್ ಈಶ್ವರಯ್ಯಸ್ವಾಮಿ, ಐಯ್ಯಣ್ಣ, ವಿ.ಮಾರನಾಯಕ, ಪಾಪಣ್ಣ, ರಾಜಣ್ಣ, ನಂಜಪ್ಪನಾಯಕ, ನಾಗೇಂದ್ರಪ್ಪ, ಕೆ.ಟಿ.ನಾಗರಾಜ್, ಕನಕಶಿವಮೂರ್ತಿ, ವೀರಭದ್ರಪ್ಪ, ದುರುಗಪ್ಪ, ವಿರೂಪಾಕ್ಷಪ್ಪ, ಬಸಯ್ಯ ಇತರರು ತಾಕೀತು ಮಾಡಿದರು.

ರೈತ ಮುಖಂಡರ ಆಕ್ಷೇಪ: ರೈತರ ಉದ್ಧಾರವೇ ನಮ್ಮ ಧ್ಯೇಯ ಎಂದು ಹೇಳುವ ಸರ್ಕಾರ, ಕೈಗೊಂಡ ಈ ನಿರ್ಧಾರದಿಂದ ರೈತರ ಬದುಕಿಗೆ ಬರೆ ಎಳೆದಂತಾಗಿದೆ. ಏಳೆಂಟು ವರ್ಷದಿಂದ ಕೈಕೊಟ್ಟ ಮಳೆಯಿಂದ ಬೆಳೆ ನಷ್ಟವಾಗಿದೆ. ಮೂರು ವರ್ಷಕ್ಕೊಮ್ಮೆ ಬಿತ್ತನೆ ಬೀಜ ಕೊಡುವ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದೆ. ಇದನ್ನು ಹಿಂಪಡೆದು ಯಥಾಸ್ಥಿತಿ ಕಾಪಾಡಬೇಕೆಂದು ರೈತ ಮುಖಂಡರು ಒತ್ತಾಯಿಸಿದರು.

ಬಿತ್ತನೆ ಬೀಜ ದುಬಾರಿ: ಪ್ರತಿವರ್ಷ ತಾಲೂಕಿನಲ್ಲಿ ಅತಿ ಹೆಚ್ಚು ಶೇಂಗಾ ಬಿತ್ತನೆ ಮಾಡಲಾಗುತ್ತಿದೆ. ಸಬ್ಸಿಡಿ ದರದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಕ್ವಿಂಟಾಲ್‌ಗೆ 5900 ರೂ. ಹಾಗೂ ಎಸ್ಸಿ-ಎಸ್ಟಿ ರೈತರಿಗೆ 5200 ರೂ. ನಂತೆ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದು, ಬೆಲೆ ದುಬಾರಿಯಾಗಿದೆ. ಸರ್ಕಾರದ ಸಬ್ಸಿಡಿ ಲೆಕ್ಕ ಕಣ್ಣೊರೆಸುವ ತಂತ್ರವಾಗಿದೆ. ಮಾರುಕಟ್ಟೆಯಲ್ಲೇ 6 ಸಾವಿರ ರೂ.ಗೆ ಬಿತ್ತನೆ ಬೀಜ ದೊರೆಯುತ್ತವೆ. ಆಂಧ್ರದಲ್ಲಿ 4200 ರೂ. ಕ್ವಿಂಟಾಲ್ ಬಿತ್ತನೆ ಬೀಜ ನೀಡುತ್ತಿದ್ದು, ಅದೇ ಮಾದರಿಯಲ್ಲಿ ನಮ್ಮಲ್ಲಿಯೂ ವಿತರಿಸಬೇಕೆಂದು ರೈತರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಅಧಿಕಾರಿ, ರಾಜ್ಯದ ಕೆಸಿಸಿ ಬೀಜ ನಿಗಮದಿಂದ ನೀಡುತ್ತಿರುವ ಬಿತ್ತನೆ ಬೀಜಗಳ ಗುಣಮಟ್ಟ ಹೆಚ್ಚಿದ್ದು, ಈ ತಳಿ ದೇಶ ಯಾವುದೇ ರಾಜ್ಯಗಳಲ್ಲಿ ನೀಡುತ್ತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net