

ಮೊಳಕಾಲ್ಮೂರು: ಮೊಳಕಾಲ್ಮೂರಿನ ಗಡಿ ಗ್ರಾಮ, ಕೂಡ್ಲಿಗಿ ತಾಲೂಕಿನ ಗಡ್ಡದ ಬೋರಯ್ಯನಹಟ್ಟಿಯಲ್ಲಿ ಭಾನುವಾರ ಸಂಜೆ ಆಕಸ್ಮಿಕ ಬೆಂಕಿಯಿಂದ ದನದ ಕೊಟ್ಟಿಗೆ, ವಾಸದ ಗುಡಿಸಲು, ದವಸಧಾನ್ಯ, 30 ಟ್ರ್ಯಾಕ್ಟರ್ ಲೋಡ್ ಶೇಂಗಾ ಆಹುತಿಯಾಗಿದೆ.
ನಾಗರಾಜ ಮತ್ತು ಕೃಷ್ಣಮೂರ್ತಿ ಅವರಿಗೆ ಸೇರಿದ 2 ದನದ ಕೊಟ್ಟಿಗೆ, ವಾಸದ ಗುಡಿಸಲು, ಮೇವಿನ ಬಣವೆ, ಒಂಭತ್ತು ಚೀಲದಷ್ಟು ಹೆಸರು, ಅಲಸಂದೆ, ತೊಗರಿ, ಹುರಳಿ ಕಾಳು, 8 ಚೀಲ ನವಣೆ ಸುಟ್ಟು ಕರಕಲಾಗಿದೆ.
ಮಲ್ಲಯ್ಯ, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ, ಮರಿಮಲ್ಲಯ್ಯ, ಚಿಕ್ಕಮಲ್ಲಯ್ಯ ಅವರಿಗೆ ಸೇರಿದ ಕೂಡು ಕಣದಲ್ಲಿದ್ದ 30 ಲೋಡ್ ಶೇಂಗಾ ಹೊಟ್ಟು ಸಂಪೂರ್ಣ ಸುಟ್ಟು ಹೋಗಿದೆ. ಮೊಳಕಾಲ್ಮೂರು ಅಗ್ನಿ ಶಾಮಕ ಸಿಬ್ಬಂದಿ, ಐದು ಗಂಟೆಗಳ ಕಾಲ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಬೆಂಕಿ ಕಾಣಿಸಿಕೊಂಡ ಕೂಡಲೇ ಗ್ರಾಮಸ್ಥರು ದನದ ಕೊಟ್ಟಿಗೆಯಲ್ಲಿದ್ದ ಜಾನುವಾರು ಮತ್ತು ಮನೆಯಲ್ಲಿದ್ದವರನ್ನು ಹೊರಗೆ ಕರೆತಂದು ಪ್ರಾಣಾಪಾಯದಿಂದ ಪಾರು ಮಾಡಿದರು.
ಅಗ್ನಿ ಶಾಮಕ ಮುಖ್ಯಾಧಿಕಾರಿ ಸುಬಾನ್ ಸಾಬ್, ಸಿಬ್ಬಂದಿ ಶಿವಾನಂದಸರೂರು, ಹನುಮಪ್ಪ ಕುರುಡಿ, ಶ್ರೀಧರ್ ಬಡಿಗೇರ, ಎಚ್.ಹೊನ್ನೂರಪ್ಪ, ಶಿವಪುತ್ರಪ್ಪ ಉಪಸ್ಥಿತರಿದ್ದರು.