ಬಿಜೆಪಿ ಆಡಳಿತದಲ್ಲಿ ಕಲ್ಯಾಣ ಕರ್ನಾಟಕದತ್ತ ರಾಜ್ಯ: ಸಚಿವ ಶ್ರೀರಾಮುಲು ಹೇಳಿಕೆ

B Sriramulu Minister
Published on

ಮೊಳಕಾಲ್ಮೂರು: ಸಾಮಾನ್ಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಜಾತ್ಯತೀತ ನಿಲುವು, ಧನಾತ್ಮಕ ಚಿಂತನೆಯಲ್ಲಿ ಬಿಜೆಪಿ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಪಟ್ಟಣದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ತಾಲೂಕು ಆಡಳಿತ ಸೌಧ ಆ.10ರಂದು ಉದ್ಘಾಟನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಬಿಜೆಪಿಯ ಪಾರದರ್ಶಕ ಆಡಳಿತದಿಂದ ಕರ್ನಾಟಕ ಕಲ್ಯಾಣ ರಾಜ್ಯದತ್ತ ಸಾಗಿ ಜನ ಮನ್ನಣೆ ಪಡೆದುಕೊಂಡಿದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ವ್ಯವಸ್ಥೆ ಸೇರಿ ಅನೇಕ ರೀತಿಯ ಪ್ರಗತಿಪರ ಕಾರ್ಯಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆ ಕಂಡಿದೆ. ಇದು ಪ್ರಧಾನಿ ಮೋದಿ ಅವರ ಸಂಕಲ್ಪವೂ ಹೌದು ಎಂದರು.

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಹಠ ತೋರಿದ್ದೇನೆ. ಗ್ರಾಮೀಣ ಜನರ ಬದುಕು ಹಸನಾಗಲೆಂದು ಶಿಕ್ಷಣ, ಆರೋಗ್ಯ, ರಸ್ತೆ, ಎಸಿ-ಎಸ್ಟಿ ಸಮುದಾಯಗಳ ಸಬಲೀಕರಣ, ಸಾಮಾಜಿಕ ಭದ್ರತೆ, ಕ್ರೀಡಾಂಗಣ, ಸಾರಿಗೆ ಡಿಪೋ, ಬಸ್ ನಿಲ್ದಾಣ, ದೇವಸ್ಥಾನಗಳ ಅಭಿವೃದ್ಧಿ ಸೇರಿ ಹತ್ತು ಹಲವು ಕಾರ್ಯಗಳಿಗೆ ಕೋಟ್ಯಂತರ ರೂ. ಅನುದಾನ ತರುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. 50 ವರ್ಷಗಳಿಂದ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿದ್ದ ಕ್ಷೇತ್ರವೀಗ ಬೆಳಕಿನಡಿಗೆ ಸಾಗುತ್ತಿದೆ ಎಂದು ಹೇಳಿದರು.

ಪಶು ವೈದ್ಯಾಧಿಕಾರಿ ಡಾ.ರಂಗಪ್ಪ, ಸಿಡಿಪಿಒ ಸವಿತಾ, ತಾಪಂ ವ್ಯವಸ್ಥಾಪಕ ನಂದೀಶ್, ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ.ಮಂಜುನಾಥ, ಶ್ರೀರಾಮರೆಡ್ಡಿ, ಮುಖಂಡರಾದ ಪಾಪೇಶ್ ನಾಯಕ, ಮಂಜುಸ್ವಾಮಿ, ಹನುಮಂತರಾಯ, ಜಯಪಾಲ ಸಂಜೀವಮೂರ್ತಿ, ಚಂದ್ರಶೇಖರ್ ಗೌಡ್ರು, ರವಿಕುಮಾರ, ಎಲ್.ಪರಮೇಶ್ವರಪ್ಪ, ಈರಮ್ಮ, ರೂಪಾ, ಸರ್ವಮಂಗಳಾ, ಸಿದ್ದಣ್ಣ, ಕಿರಣ್ ಗಾಯಕವಾಡ್, ಪ್ರಭಾಕರ, ಸೋಮೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net