

ಮೊಳಕಾಲ್ಮೂರು: ಕರೊನಾ ಹಳ್ಳಿಗಳಿಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಲು ಇನ್ಮುಂದೆ ನಮ್ಮ ನಡೆ ಹಳ್ಳಿ ಕಡೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬಗರ್‌ಹುಕುಂ ಸಾಗುವಳಿ ಸಕ್ರಮ ಕುರಿತ ಸರ್ವೆ-ಕಂದಾಯ ಅಧಿಕಾರಿಗಳ ಜಂಟಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಸುರಕ್ಷತಾ ಕ್ರಮಗಳಿಂದ ಕರೊನಾ ಸಾಕಷ್ಟು ಹತೋಟಿಗೆ ಬಂದಿದೆ. ಅನ್ಯ ರಾಜ್ಯ-ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ವಾಪಸ್ ಹೋಗುತ್ತಿದ್ದು, ಇದರಿಂದ ಸ್ಥಳೀಯರು ಭೀತಿಗೊಳಗಾಗುತ್ತಿದ್ದಾರೆ ಎಂದರು.
ಆದ್ದರಿಂದ ಹಳ್ಳಿಗೆ ಬರುವವರನ್ನು ತಡೆಯಲು ಕರೊನಾ ಸೇನಾನಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ನಾವು ಇನ್ಮುಂದೆ ಗ್ರಾಮಗಳಲ್ಲಿ ಪ್ರವಾಸ ಮಾಡಿ, ಜನರ ಆತಂಕ ದೂರ ಮಾಡಿ ಆತ್ಮಸ್ಥೈರ್ಯ ತುಂಬುತ್ತೇವೆ ಎಂದು ತಿಳಿಸಿದರು. ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿನ ಕೆಲ ಬಡ ಕುಟುಂಬಗಳಿಗೆ ಕಿರುಅರಣ್ಯ ಅಥವಾ ಸರ್ಕಾರಿ ಭೂಮಿ ಸಾಗುವಳಿಯೇ ಜೀವನಾಧಾರವಾಗಿದೆ. ಸಂಬಂಧಿತ ಅಧಿಕಾರಿಗಳ ಜಂಟಿ ಸಮೀಕ್ಷೆ ವರದಿ ಆಧಾರದ ಮೇಲೆ ನ್ಯಾಯ ಕೊಡಿಸಲಾಗುವುದು ಎಂದರು.
ಕೊಂಡ್ಲಹಳ್ಳಿ ಸಮೀಪ ಜವಳಿ ಪಾರ್ಕ್ ನಿರ್ಮಾಣಕ್ಕೆ 30 ಎಕರೆ ಕಾಯ್ದಿರಿಸಲಾಗಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಮತ್ತು ಕಾಟನ್ ಉದ್ಯಮಕ್ಕಾಗಿ ಅಂದಾಜು ವೆಚ್ಚದ ಕ್ರಿಯಾಯೋಜನೆ ಪಟ್ಟಿ ಸಿದ್ಧತೆ ಕಾರ್ಯದಲ್ಲಿದೆ ಎಂದರು.
ತಹಸೀಲ್ದಾರ್ ಎಂ.ಬಸವರಾಜ್, ಅಧಿಕಾರಿಗಳಾದ ರವಿಕುಮಾರ್, ರುದ್ರಪ್ಪ, ಪ್ರಸನ್ನಕುಮಾರ್, ಬಗರ್‌ಹುಕುಂ ಕಮಿಟಿ ಸದಸ್ಯರಾದ ಪಾರ್ವತಮ್ಮ, ಶಂಕ್ರಪ್ಪ, ವಿ.ಜಿ.ಪರಮೆಶ್ವರಪ್ಪ, ಡಾ.ಮಂಜುನಾಥ್ ಇತರರಿದ್ದರು.
ನ್ಯಾಯ ಕಲ್ಪಿಸಲು ಪಟ್ಟು
ಬಗರ್‌ಹುಕುಂ ಅಕ್ರಮ-ಸಕ್ರಮದಡಿ ಇರುವ ಸಮಸ್ಯೆಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳ ಹಿತಕಾಯಬೇಕು ಎಂದು ಮೊಳಕಾಲ್ಮೂರಿನ ಸಿಪಿಐ ಒಕ್ಕೂಟದ ಪದಾಧಿಕಾರಿಗಳು, ಸಾಗುವಳಿದಾರರು ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.
ಮುತ್ತಿಗಾರಹಳ್ಳಿ ಗ್ರಾಮದ ಸ.ನಂ.66ರಲ್ಲಿ 100 ಎಕರೆಗೂ ಅಧಿಕ ಇರುವ ಸರ್ಕಾರಿ ಜಮೀನನ್ನು 60ಕ್ಕೂ ಹೆಚ್ಚು ರೈತರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದು, ಫಾರಂ ನಂ.57ರ ಅಡಿ ಸಕ್ರಮಕ್ಕಾಗಿ ಸಲ್ಲಿಸಿದ್ದಾರೆ ಎಂದರು. ಮನವಿ ಸ್ವೀಕರಿಸಿದ ಸಚಿವರು, ನ್ಯಾಯ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.