

ಮೈಸೂರು: ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶುಕ್ರವಾರ ಭರತನಾಟ್ಯ ಹಾಗೂ ಮೋಹಿನಿ ಅಟ್ಟಂ ಸಮ್ಮಿಲನ ಮೋಡಿ ಮಾಡಿತು.
ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷಾಧಿಕಾರಿ ಡಾ.ವೈಷ್ಣವಿ ಕುಪ್ಪಸ್ವಾಮಿ (ಕೆಎಎಸ್) ಹಾಗೂ ಶಿವಮೊಗ್ಗದ ಸಹಚೇತನ ನಾಟ್ಯಾಲಯದ ವಿದುಷಿ ಸಹನಾ ಚೇತನ್ ಅವರು ನಡೆಸಿಕೊಟ್ಟ ವಿಶಿಷ್ಟವಾದ ಶಾಸ್ತ್ರೀಯ ಭರತನಾಟ್ಯ-ಮೋಹಿನಿ ಅಟ್ಟಂ ನೋಡುಗರನ್ನು ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿತು.
ಪುರಂದರದಾಸರು ಹಾಗೂ ಮುತ್ತುಸ್ವಾಮಿ ದೀಕ್ಷಿತರ ಆಯ್ದ ಕೃತಿಗಳನ್ನು ಅಭಿವ್ಯಕ್ತಿಶೀಲ ನೃತ್ಯರೂಪಕಗಳನ್ನು ಪ್ರಸ್ತುತಪಡಿಸಲಾಯಿತು. ರಾವಣ ಶಿವನ ಆತ್ಮಲಿಂಗವನ್ನು ಸ್ವೀಕರಿಸುವುದು, ಸೀತೆಯ ಅಪಹರಣ, ಹನುಮಂತನು ರಾಜರಾಜೇಶ್ವರಿಯನ್ನು ಸ್ತುತಿಸುವುದು, ಸೀಮೋಲ್ಲಂಘನ, ಲಂಕಾ ದಹನ ಮತ್ತು ಶ್ರೀರಾಜ ಇನ್ನಿತರ ಪ್ರಸಂಗಗಳು, ಮೋಹಿನಿ ಅಟ್ಟಂ ನೃತ್ಯ ಪ್ರದರ್ಶನ ವಿಶೇಷವಾಗಿತ್ತು.
ಡಾ.ವೈಷ್ಣವಿ ಕುಪ್ಪಸ್ವಾಮಿ ಅವರು ಶ್ರೀ ಚಕ್ರರಾಜ ಸಿಂಹಾಸನೇಶ್ವರಿಯನ್ನು ಮೋಹಿನಿ ಅಟ್ಟಂ ನೃತ್ಯ ಪ್ರಕಾರದಲ್ಲಿ ಪ್ರಸ್ತುತಪಡಿಸಿದರೆ, ಸಹನಾ ಚೇತನ್ ಅವರು ಅದಿಪೂಜಿತ ಗಣಪತಿಯನ್ನು ಭರತನಾಟ್ಯದಲ್ಲಿ ಪ್ರಾರ್ಥಿಸಿದರು. ಬಳಿಕ ರಾಮಾಯಣದ ಭಾಗದಲ್ಲಿ ಶ್ರೀರಾಮಚಂದ್ರ ಹಾಗೂ ಹನುಮಂತ ಸಂದಿಸುವ ಸನ್ನಿವೇಶವನ್ನು ಹನುಮಂತ ದೇವ ನಮೋ ನೃತ್ಯದ ಮೂಲಕ ಡಾ.ವೈಷ್ಣವಿ ಕುಪ್ಪಸ್ವಾಮಿ, ಸಹನಾ ಚೇತನ್ ಕಟ್ಟಿಕೊಟ್ಟರು. ಭರತನಾಟ್ಯ, ಮೋಹಿನಿ ಅಟ್ಟಂ ಎರಡು ಪ್ರಕಾರಗಳ ಸಮ್ಮಿಲನ ನಾಟ್ಯಪ್ರಿಯರ ಮೆಚ್ಚುಗೆ ಗಳಿಸಿತು. ಪುರಂದರದಾಸರ ರಚನೆಯ ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಗೆ ಇಬ್ಬರು ಕಲಾವಿದರು ಪ್ರಸ್ತುತಪಡಿಸಿದ ಎರಡು ಪ್ರಕಾರದ ನೃತ್ಯದ ಜುಗಲ್ ಬಂದಿ ಚಪ್ಪಾಳೆ ಗಿಟ್ಟಿಸಿತು.
ಈ ವೇಳೆ ಮಾತನಾಡಿದ ಡಾ.ವೈಷ್ಣವಿ ಕುಪ್ಪಸ್ವಾಮಿ, ಯಾವುದೇ ಕೆಲಸ ಮಾಡಬೇಕಾದರೂ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದರೆ ಮಾತ್ರ ನ್ಯಾಯ ದೊರಕಿಸಿಕೊಡಲು ಸಾಧ್ಯ. ಅಧಿಕಾರಿಯಾಗಿ ಕಚೇರಿಗೆ ಬರುವ ಕುಂದುಕೊರತೆಗಳನ್ನು ಕೇವಲ ಕಡತವಾಗಿ ನೋಡದೆ ಪಾತ್ರಗಳಾಗಿ ನೋಡಿದಾಗ ಅವರ ನೋವು, ಸಂಕಷ್ಟ ಅರ್ಥವಾಗುತ್ತದೆ ಎಂದು ಹೇಳಿದರು.
ಮನಸ್ಸು ಉಲ್ಲಾಸಗೊಳ್ಳಲು ಕಲೆ, ಸಂಗೀತ, ಸಾಹಿತ್ಯ ಯಾವುದಾದರೂ ಒಂದನ್ನು ದಿನದಲ್ಲಿ ಒಂದು ಗಂಟೆ ಕಾಲ ಅದರೊಂದಿಗೆ ಕಳೆಯಬೇಕು. ಇದರಿಂದ ನಾವು ಏನು ಎನ್ನುವುದು ನಮಗೆ ಅರ್ಥವಾಗುತ್ತದೆ. ಕುಟುಂಬದ ಪ್ರೋತ್ಸಾಹವೂ ಅಗತ್ಯ ಎಂದರು.
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಪಿ. ಸುಧೀಂದ್ರ, ಕಾಂಗ್ರೆಸ್ ನಗರ ವಿಭಾಗದ ಅಧ್ಯಕ್ಷ ಆರ್.ಮೂರ್ತಿ, ಸಮಿತಿ ಸದಸ್ಯರು ಕಲಾವಿದರನ್ನು ಸನ್ಮಾನಿಸಿದರು.