ಮುಸ್ಲಿಮರು ಇಲ್ಲದ ಊರುಗಳಲ್ಲಿ ಮೊಹರಂ ಆಚರಣೆ

Kavital moharam
ಮುಸ್ಲಿಮರು ಇಲ್ಲದ ಹಿಲಾಲಪುರದಲ್ಲಿ ಹಿಂದುಗಳು ಪ್ರತಿಷ್ಠಾಪಿಸಿರುವ ಪೀರಲು ದೇವರುಗಳು.
Published on

ಕವಿತಾಳ: ಹಿಂದು-ಮುಸ್ಲಿಮರು ಸೌಹಾರ್ದದಿಂದ ಆಚರಿಸುವ ಮೂಲಕ ಸಾಮರಸ್ಯಕ್ಕೆ ಮಾದರಿಯಾದ ಮೊಹರಂ ಹಬ್ಬವನ್ನು ಮುಸ್ಲಿಮರು ಇಲ್ಲದ ಕೆಲ ಗ್ರಾಮಗಳಲ್ಲಿ ಹಿಂದುಗಳೇ ಸಂಭ್ರಮದಿಂದ ಆಚರಿಸುವುದು ವಿಶೇಷವಾಗಿದೆ.

ಮೊಹರಂ ಹಿಂದು-ಮುಸ್ಲಿಮರ ಭಾವೈಕ್ಯಕ್ಕೆ ಸಾಕ್ಷಿಯಾಗಿದೆ. ಆದರೆ, ಮುಸ್ಲಿಮರೇ ಇಲ್ಲದ ಪಾಮನಕಲ್ಲೂರು ಗ್ರಾಪಂ ಹಿಲಾಲಪುರ, ಬೆಂಚಮರಡಿ, ಚಿಲ್ಕರಾಗಿ, ಅಮೀನಗಡ ಪಂಚಾಯಿತಿ ವ್ಯಾಪ್ತಿಯ ಯತಗಲ್, ವಟಗಲ್ ಗ್ರಾಪಂ ವ್ಯಾಪ್ತಿಯ ವಟಗಲ್, ಇರಕಲ್ ಹಾಗೂ ತೋರಣ ದಿನ್ನಿ, ತೊಪ್ಪಲದೊಡ್ಡಿ, ಗೊಲದಿನ್ನಿಯಲ್ಲಿ ಹಿಂದುಗಳೇ ಹಬ್ಬ ಆಚರಣೆ ಮಾಡುವ ಮೂಲಕ ಭಾವೈಕ್ಯ ಮೆರೆಯುತ್ತಾರೆ.

ಅದರಲ್ಲೂ ಹಿಲಾಲಪುರ ಗ್ರಾಮದಲ್ಲಿ ಈ ಹಿಂದೆ ಮೊಹರಂ ಆಚರಿಸುತ್ತಿರುವಾಗ ಸರಿಯಾದ ಮಸೀದಿಗಳು ಇರಲಿಲ್ಲ. ನೀರಾವರಿ ಹೋರಾಟಗಾರ ಬಾಬುಗೌಡ (ವಿಶ್ವನಾಥರಡ್ಡಿ) ಅವರು ಹುಟ್ಟೂರಲ್ಲಿ ಭಾವೈಕ್ಯೆ ಕಾಪಾಡುವ ಸಲುವಾಗಿ ಶಿಥಿಲಗೊಂಡ ಪುರಾತನ ಮಸೀದಿಯನ್ನು ತೆರವುಗೊಳಿಸಿ ಸ್ವಂತ ಖರ್ಚಿನಲ್ಲಿ ನೂತನ ಮಸೀದಿ ನಿರ್ಮಿಸಿ ಬೇರೆ ಗ್ರಾಮದಿಂದ ಮೌಲ್ವಿಗಳನ್ನು ಕರೆಯಿಸಿ ಧಾರ್ಮಿಕ ಕಾರ್ಯಕ್ರಮಗಳು ನಡೆಸುವಂತೆ ಮಾಡಿದ್ದು, ಪ್ರತಿ ವರ್ಷ ಮೊಹರಂ ಹಬ್ಬವನ್ನು ಸಡಗರಿಂದ ಆಚರಿಸಲಾಗುತ್ತಿದೆ.

ಹಬ್ಬದ ಅಂಗವಾಗಿ ಶನಿವಾರ ಕತಲ್ ರಾತ್ರಿ, ಭಾನುವಾರ ದಫನ್ ಜರುಗಲಿದೆ. ಹಸೇನ್, ಹುಸೇನ್ ದೇವರ ಕುದುರೆಗಳಾಗಿ ಅಂಬಣ್ಣ, ಯಂಕೋಬ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮದ ಪ್ರತಿಯೊಬ್ಬರ ಮನೆಯನ್ನು ಸುಣ್ಣಬಣ್ಣದಿಂದ ಸಿಂಗರಿಸಲಾಗುತ್ತದೆ. ಅಲಾಯಿ ದೇವರುಗಳಿಗೆ ಹರಕೆ ಹೊತ್ತವರು ಸಕ್ಕರೆ ತುಲಾಭಾರ ಮಾಡಿಸುವುದು, ದೇವರುಗಳಿಗೆ ಹೊಸ ವಸ್ತ್ರಗಳನ್ನು ಸಮರ್ಪಿಸುವ ಮುಖಾಂತರ ಹಬ್ಬ ಆಚರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net