

ನಾಲತವಾಡ: ಪಟ್ಟಣದ ನಾನಾ ಮಸೀದಿಗಳಲ್ಲಿ 5 ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರ ಪಂಜಾಗಳ ಸಾಮೂಹಿಕ ಮೆರವಣಿಗೆ ಪಟ್ಟಣದಲ್ಲಿ ಬುಧವಾರ ಅದ್ದೂರಿಯಿಂದ ನಡೆಯಿತು.
ಭಾವೈಕ್ಯ ಸಾರುವ ಮೊಹರಂ ಮೆರವಣಿಗೆಯಲ್ಲಿ 10 ಸಾವಿರಕ್ಕೂ ಅಧಿಕ ಹಿಂದು&ಮುಸ್ಲಿಮರು ಭಾಗಿಯಾಗಿ ಭಕ್ತಿ ಸಮರ್ಪಿಸಿದರು.
ನಾಡಗೌಡ, ಅವಟಿ, ಖಾಜಿ, ಸಿಕ್ಕಲಗಾರ, ಬಾರಪೇಟ, ಜಾಲಗಾರ, ಸರಕಾರಿ, ಹವೇಲಿ ಹಾಗೂ ತಳಗಿನ ಮಸೀದಿಯ 20ಕ್ಕೂ ಹೆಚ್ಚು ಪಂಜಾ ಹಾಗೂ ಡೋಲಿಗಳಿಗೆ ಭಕ್ತರು ಅರ್ಪಿಸಿದ ನಾನಾ ಬಗೆಯ ಹೂಮಾಲೆ, ತುರಾಯಿಗಳು ಮೆರವಣಿಗೆಗೆ ಮೆರುಗು ನೀಡಿದವು.
ಅಗಸಿ ಮುಖ್ಯದ್ವಾರದಲ್ಲಿ ಪರಸ್ಪರ ಸಮ್ಮಿಲನಗೊಂಡ ಪಂಜಾಗಳು ನಂತರ ವೀರೇಶ್ವರ ದೇವಾಲಯ ರಸ್ತೆ, ಜಾಮೀಯಾ ಮಸೀದಿ ಮೂಲಕ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಭೇಟಿ ನೀಡುವ ಮೂಲಕ ನೋಡುಗರ ಮನ ಸೆಳೆದವು. ದೇಶಮುಖ ಧಣಿಗಳ ನಿವಾಸದ ಎದುರು ಆಯಾ ಮಸೀದಿಗಳ ಪಂಜಾಗಳು ಬೇರ್ಪಟ್ಟು ಸ್ವಸ್ಥಾನಕ್ಕೆ ತೆರಳಿದವು.
ರಾತ್ರಿ ಪಂಜಾಗಳ ದಫನ್ ಕಾರ್ಯ ನಡೆಯಿತು. ಅವಟಿ ಓಣಿಯ ಅಲಾಯಿ ದೇವರುಗಳ ಮುಂದೆ ವಿದಾಯದ ಹಾಡು ಹಾಡಿ ಬೀಳ್ಕೊಡಲಾಯಿತು.
ಬಿಗಿ ಬಂದೋಬಸ್ತ್: ಮುದ್ದೇಬಿಹಾಳ ಪಿಎಸ್ಐ ಸಂಜಯ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಸ್ಥಳಿಯ ಮುಖ್ಯ ಪೇದೆ ಪಿ.ಎಸ್.ಪಾಟೀಲ, ಎಎಸ್ಐ ಎ.ವೆ.ಸಾಲಿ, ಬಸವರಾಜ ಹಿಪ್ಪರಗಿ, ಬಸವರಾಜ ಚಿಂಚೊಳ್ಳಿ, ಹನುಮಂತ ಹೆಬ್ಬುಲಿ, ಚಿದಾನಂದ ಸುರಗಿಹಳ್ಳಿ ಅವರು ಬಂದೋಬಸ್ತ್ ಕೈಗೊಂಡಿದ್ದರು.