

ಗುರುಗುಂಟಾ: ಗ್ರಾಮದಲ್ಲಿ ಮೊಹರಂ ಹಬ್ಬದ ಕತ್ತಲ್ ರಾತ್ರಿಯ ಅಂಗವಾಗಿ ಎತ್ತೊಂದು 35 ಟನ್ ಭಾರದ ಕಟ್ಟಿಗೆಯ 35 ಚಕ್ಕಡಿಗಳನ್ನು ಶುಕ್ರವಾರ ಎಳೆದು ಸಾಹಸ ಮರೆಯಿತು.
ಎತ್ತು ರೈತ ವಿಕ್ರಂ ಜೆಟ್ಟಿಯ ಅವರದ್ದು. ರೈತ ಮಸೀದಿಯ ಹುಸೇನ್ ಪಾಷಾ, ಹಸನ್-ಹುಸೇನ್, ಗದ್ದೆಸಾಬ್ ಪೀರಲು ದೇವರ ಮುಂದಿನ ಅಗ್ನಿಕುಂಡಗಳಿಗೆ ಕಟ್ಟಿಗೆ ಸೇವೆ ಸಲ್ಲಿಸಲು ಕಟ್ಟಿಗೆಗಳನ್ನು ಚಕ್ಕಡಿ ಮೂಲಕ ತಂದಿದ್ದರು. 40-50 ಅಡಿ ಅಂತರದ ಗುಡ್ಡದ ಮೇಲಿರುವ ಗದ್ದೆಸಾಬ್ ಹಾಗೂ ಹಸನ-ಹುಸೇನ್ ದೇವರಿಗೆ ಕಟ್ಟಿಗೆಗಳನ್ನು ಚಕ್ಕಡಿಗಳ ಮೂಲಕ ಹೊತ್ತೊಯ್ಯುವ ದೃಶ್ಯ ನೋಡುಗರ ಮೈನವೀರೇಳುವಂತೆ ಮಾಡಿತು. ಈ ವೇಳೆ ಗುಡ್ಡದ ಇಕ್ಕೆಲಗಳಲ್ಲಿ ಸಹಸ್ರ ಸಂಖ್ಯೆಯ ಭಕ್ತರು ದೌಡಾಯಿಸಿ ದೃಶ್ಯವನ್ನು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ರೈತ ವಿಕ್ರಂ ಜೆಟ್ಟಿಯ ಎತ್ತನ್ನು ಮಸೀದಿಗೆ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದರು.