

ಬೆಳಗಾವಿ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ, ಹುಬ್ಬಳ್ಳಿಯ ಮೋಹನ್ ಲಿಂಬಿಕಾಯಿ ಅವರು ಗುರುವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸುರ್ಜೇವಾಲಾ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.
ಬೆಳಗಾವಿ ನಗರದಲ್ಲಿನ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಮೋಹನ್ ಲಿಂಬಿಕಾಯಿ ಅವರು, ಭಾರತೀಯ ಜನತಾ ಪಕ್ಷದಲ್ಲಿ ಉಸಿರುಗಟ್ಟಿದ ವಾತಾವರಣವಿದೆ. ದುಡಿಯುವ ಕಾರ್ಯಕರ್ತರ ಕೆಲಸಕ್ಕೆ ಬೆಲೆ ಇಲ್ಲ. ಎಲ್ಲವನ್ನೂ ಕೆಲವೇ ಕೆಲವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಲ್ಲದೇ, ಕಳೆದ ಮೂರುವರೆ ವರ್ಷದಲ್ಲಿ ಅಧಿಕಾರದಲ್ಲಿದ್ದರೂ ಜನಪರ ಆಡಳಿತ ನೀಡದ ಕಾರಣಕ್ಕೆ ಬಿಜೆಪಿ ತೊರೆದಿರುವೆ ಎಂದರು.
ಯಾವುದೇ ಷರತ್ತು ವಿಧಿಸದೇ ಕಾಂಗ್ರೆಸ್ ಸೇರಿದ್ದು, ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸಲು ಸಿದ್ದನಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ಮಾಜಿ ಸಚಿವ ಎಂ.ಬಿ.ಪಾಟೀಲ, ಕೆ.ಎಚ್.ಮುನಿಯಪ್ಪ ಸೇರಿದಂತೆ ಇತರರಿದ್ದರು.