

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾನು. ಈಗಾಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನನ್ನನ್ನು ಕರೆದು ಮಾತನಾಡಿದ್ದಾರೆ. ಚುನಾವಣೆಗೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಅಪರೋಕ್ಷ ಸೂಚನೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಅವರ ಜತೆಗೆ ಇತ್ತೀಚೆಗೆ ಚರ್ಚೆ ಮಾಡಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ಲಭಿಸಿದೆ. ಕ್ಷೇತ್ರದಲ್ಲಿ ನಾನು ಜನರಿಗೆ ಚಿರಪರಿಚಿತ. ಅವರೊಂದಿಗೆ ಮೊದಲಿನಿಂದಲೂ ನಿಕಟ ಸಂಪರ್ಕದಲ್ಲಿದ್ದೇನೆ. ಟಿಕೆಟ್ ನನಗೆ ಲಭಿಸುವ ವಿಶ್ವಾಸವಿದೆ ಎಂದರು.
ಲಿಂಗಾಯತರು ಬಹಳಷ್ಟು ಜನರು ಕಾಂಗ್ರೆಸ್ಗೆ ಬಂದಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬರುವುದು ಗೊತ್ತಿಲ್ಲ. ಟಿಕೆಟ್ ಆಕಾಂಕ್ಷಿಗಳ ದಂಡು ಇದೆ. ಆದರೆ, ನನಗೇ ಸಿಗುವ ವಿಶ್ವಾಸವಿದೆ. ನಾನು ಕಾಂಗ್ರೆಸ್ಗೆ ಬಂದಾಗಿನಿಂದಲೂ ಬಿ.ಎಸ್. ಯಡಿಯೂರಪ್ಪ ಅವರ ಜತೆಗೆ ಸಂಪರ್ಕದಲ್ಲಿಲ್ಲ. ಪ್ರಲ್ಹಾದ ಜೋಶಿ ಅವರ ಕ್ಷೇತ್ರದ ಸ್ಥಾನಪಲ್ಲಟ ವಿಷಯ ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ ಎಂದರು.