

ಸುಳ್ಯ: ಗುತ್ತಿಗಾರು ಗ್ರಾಮದ ಕಮಿಲ ಇತಿಹಾಸ ಪ್ರಸಿದ್ಧ ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಭಕ್ತಿ-ಸಂಭ್ರಮದಿಂದ ನಡೆಯಿತು.
ಭಾನುವಾರ ಮಧ್ಯಾಹ್ನ ಮೊಗ್ರ ದೊಡ್ಡಮನೆಯಲ್ಲಿ ದೇವರಿಗೆ ಸಮಾರಾಧನೆ ನಡೆಯಿತು. ರಾತ್ರಿ ಮಲ್ಕಜೆ ಮಾಳಿಗೆಯಿಂದ ಭಂಡಾರ ಬಂದು ಸೋಮವಾರ ಬೆಳಗ್ಗೆ ಶ್ರೀ ಉಳ್ಳಾಕುಲು ನೇಮ, ನಂತರ ಶ್ರೀ ಕುಮಾರ ನೇಮ ನಡೆಯಿತು.
ಸಂಜೆ ಉಳ್ಳಾಕುಲು ಭಂಡಾರ ಹೊರಟು, ಶ್ರೀ ಪುರುಷ ದೈವದ ನೇಮ, ರಾತ್ರಿ ಶ್ರೀ ರುದ್ರಚಾಮುಂಡಿ ನೇಮ, ಶ್ರೀ ಮಲೆಚಾಮುಂಡಿ ನೇಮ ನಡೆಯಿತು.
ಮಂಗಳವಾರ ಬೆಳಗ್ಗೆ ಶ್ರೀ ಬೈರಜ್ಜಿ ನೇಮ ನಡೆಯಿತು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಪ್ರಮುಖರಾದ ಎಂ.ಎನ್. ವೆಂಕಟ್ರಮಣ ಮೊಗ್ರ, ಕಾರ್ಯಪ್ಪ ಗೌಡ ಚಿಕ್ಮುಳಿ, ಚೆನ್ನಕೇಶವ ಗೌಡ ಕಮಿಲ, ಉಮೇಶ್ ಗೌಡ ಮಕ್ಕಿ, ಕೇಶವ ಗೌಡ ಬಳ್ಳಕ್ಕ, ದೊಡ್ಡಣ್ಣ ಗೌಡ ಚಿಕ್ಮುಳಿ, ಸೀತಾರಾಮ ಗೌಡ ಚಿಕ್ಮುಳಿ, ರಾಮಕೃಷ್ಣ ಗೌಡ ಚಿಕ್ಮುಳಿ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಜ.23ರಂದು ಬೆಳಗ್ಗೆ ನಡಾವಳಿ ಸ್ಥಾನದಿಂದ ಮೂವ ಮಾಳಿಗೆಗೆ ಭಂಡಾರ ಹೊರಟು ರಾತ್ರಿ ಮೂವ ಮಾಳಿಗೆಯಿಂದ ರಾಜಾಂಗಣಕ್ಕೆ ಭಂಡಾರ ಹೊರಡಲಿದೆ. 24ರಂದು ಬೆಳಗ್ಗೆ ಬ್ರಹ್ಮರ ನೇಮ, ರಾಜನ್ ದೈವ ಮತ್ತು ಉಪದೈವಗಳ ನೇಮ ನಡೆಯಲಿದೆ.