

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಉಡಾನ್ ಯೋಜನೆ ಮೂಲಕ ಹವಾಯಿ ಚಪ್ಪಲಿ ಹಾಕುವವನೂ ವಿಮಾನಯಾನ ಮಾಡಬೇಕೆಂಬ ಕನಸು ಹೊಂದಿದ್ದಾರೆ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಬರೀ ಭಾಷಣ ಮಾಡಿದರೆ ಸಾಲದು. ಹವಾಯಿ ಚಪ್ಪಲಿ ಹಾಕುವವರು ವಿಮಾನದಲ್ಲಿ ಪ್ರಯಾಣ ಮಾಡುವಂತೆ ಆಗಬೇಕು. ಆದರೆ ಸದ್ಯ ಆತ ಆ ಕಡೆ ಮುಖ ಹಾಕುವುದಕ್ಕೂ ಸಾಧ್ಯವಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಕನಸು ಕಾರ್ಯಗತವಾಗಬೇಕು. ಅದಕ್ಕೆ ಬೇಕಾದ ಬದ್ಧತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಭರವಸೆಗಳನ್ನು ನೀಡಿತ್ತು. ಅವುಗಳನ್ನು ಹಂತಹಂತವಾಗಿ ಈಡೇರಿಸಲಾಗುತ್ತಿದೆ ಎಂದರು.
ಶಿವಮೊಗ್ಗದಿಂದ ವಿಮಾನ ಪ್ರಯಾಣದರ ದುಬಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಅದು ಸಾಮಾನ್ಯ ಜನರಿಗೆ ತಲುಪುವಂತಾಗಬೇಕು. ವಾಯುಯಾನದ ಲಾಭ ಬಳಸಿಕೊಂಡು ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ಹೇಳಿದರು.
ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಆಗಿರುವುದು ಸಂತೋಷದ ಸಂಗತಿ. ಅದರೊಂದಿಗೆ ಬಡ ಜನರ ಏಳಿಗೆಯತ್ತಲೂ ನಾವು ಗಮನ ಹರಿಸಬೇಕಿದೆ. ವಿಮಾನ ನಿಲ್ದಾಣ ಆಗಿರುವುದರ ಲಾಭ ಸಾಮಾನ್ಯ ಜನರಿಗೂ ಸಿಗಬೇಕು. ಇಲ್ಲಿ ಕೈಗಾರಿಕೆಗಳು ನಿರ್ಮಾಣವಾಗಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವುದು ಮುಖ್ಯವಲ್ಲ. ಉದ್ದಿಮೆದಾರರು ಬರುವಂತೆ ಮೂಲಸೌಕರ್ಯ ಕಲ್ಪಿಸುವುದು ಮುಖ್ಯವಾಗುತ್ತದೆ ಎಂದರು.