

ಶಿವಮೊಗ್ಗ: ಪಾಕಿಸ್ತಾನದ ನಡುವಿನ ಕದನ ವಿರಾಮ ಶಾಶ್ವತವಲ್ಲ, ಇನ್ನು ಮುಂದೆ ಭಯೋತ್ಪಾದಕ ದಾಳಿ ನಡೆದರೆ ಅದನ್ನು ಯುದ್ಧವೆಂದೇ ಪರಿಗಣಿಸಲಾಗುತ್ತದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮೂರೇ ದಿನಗಳಲ್ಲಿ ಪಾಕಿಸ್ತಾನಕ್ಕೆ ಏರ್‌ಸ್ಟ್ರೈಕ್ ಮೂಲಕ ಸಾಕಷ್ಟು ಹೊಡೆತ ನೀಡಲಾಗಿದೆ. ಎಂಟು ಪ್ರಮುಖ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಧೂ ನದಿ ನೀರಿನ ಹರಿವನ್ನು ಭಾರತ ಸ್ಥಗಿತಗೊಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಪಾಕ್‌ಗೆ ಜಲಕ್ಷಾಮ ಎದುರಾಗಲಿದೆ. ಸೇನಾ ಕಾರ್ಯಾಚರಣೆ ಹಾಗೂ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಲಾಗಿದೆ. ಇದು ಯುದ್ಧ ಹಾಗೂ ಭಯೋತ್ಪಾದನೆಯ ಪೋಷಣೆ ಯುಗವಲ್ಲ ಎಂಬ ಮೋದಿ ಮಾತುಗಳು ಸಮಯೋಚಿತ ಎಂದರು.
ಮೂರು ದಿನಗಳಲ್ಲೇ ಭಾರತದ ದಾಳಿಗೆ ತತ್ತರಿಸಿದ ಪಾಕಿಸ್ತಾನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿ ಅಂಗಲಾಚಿದ ಪರಿಣಾಮ ಕದನ ವಿರಾಮ ಘೋಷಣೆಯಾಗಿದೆ. ಆದರೆ ಇದು ಶಾಶ್ವತವಲ್ಲ. ಕದನ ವಿರಾಮದ ಬಗ್ಗೆ ಮಾತನಾಡುವಾಗ ಟ್ರಂಪ್ ಲಘುವಾದ ಪದ ಬಳಕೆ ಮಾಡಿದ ಬಗ್ಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ. ಟ್ರಂಪ್ ಹೇಳಿಕೆಗೆ ನಮ್ಮ ರಾಷ್ಟ್ರೀಯ ನಾಯಕರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್‌ಗೆ ಶರಣಾಗಿ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರ ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಇದು ರಾಜತಾಂತ್ರಿಕ ನಡೆಯ ಒಂದು ಭಾಗ ಎಂಬುದನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಎಲ್ಲರೂ ದೇಶ ಹಾಗೂ ಸೈನ್ಯದ ಜತೆ ನಿಲ್ಲಬೇಕು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.