

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಮಧ್ಯಾಹ್ನ ಕಡಕೊಳ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿ(70), ಪುತ್ರ ಮೆಹೂಲ್ ಪ್ರಹ್ಲಾದ್ ಮೋದಿ (40), ಸೊಸೆ ಜಿಂದಾಲ್ ಮೋದಿ (35), ಮೊಮ್ಮಗ ಮಾಸ್ಟರ್ ಮೆಹತ್ ಮೆಹೂಲ್ ಮೋದಿ (6), ಕಾರು ಚಾಲಕ ಸತ್ಯನಾರಾಯಣ(46) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ನಗರದ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಹ್ಲಾದ್ ಮೋದಿ ಅವರಿಗೆ ಮುಖ ಸೇರಿದಂತೆ ಕೆಲವೆಡೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರ ಮೊಮ್ಮಗನ ಕಾಲಿಗೆ ಗಾಯವಾಗಿದೆ. ಯಾರಿಗೂ ದೊಡ್ಡ ಪ್ರಮಾಣದಲ್ಲಿ ಪೆಟ್ಟು ಬಿದ್ದಿಲ್ಲ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಾರು ಅಪಘಾತಕ್ಕೀಡಾಗುತ್ತಿದ್ದಂತೆಯೇ ಮೋದಿ ಅವರೊಂದಿಗೆ ಇತರ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ಕೂಡಲೇ ಧಾವಿಸಿ ಅವರನ್ನು ಸ್ಥಳದಿಂದ ಕರೆದೊಯ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಂಡೀಪುರಕ್ಕೆ ಹೊರಟಿದ್ದರು: ಪ್ರಹ್ಲಾದ್ ಮೋದಿ ಕುಟುಂಬ ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿತ್ತು. ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದ ತಕ್ಷಣ ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಓಪನ್ ಆದ ಪರಿಣಾಮ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತದ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ನೀಡಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.