

ಮೈಸೂರು: ಮರಾಠ ಸಾಮ್ರಾಜ್ಯದ ಮಾಲ್ವ ಪ್ರಾಂತ್ಯದ ರಾಣಿಯಾಗಿದ್ದ ಅಹಲ್ಯ ಬಾಯಿ ಹೋಳ್ಕರ್ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹೇಳಿದರು.
ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಅಹಲ್ಯಬಾಯಿ ಹೋಳ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಹಲ್ಯ ಬಾಯಿ ಹೋಳ್ಕರ್ ಅವರು ಛತ್ರಗಳನ್ನು ನಿರ್ಮಿಸಿ ಅನ್ನದಾನ ಮಾಡುತ್ತಿದ್ದರು. ಅನೇಕ ಕೆರೆ, ಬಾವಿಗಳನ್ನು ನಿರ್ಮಾಣ ಮಾಡಿದ್ದರು. ನರೇಂದ್ರ ಮೋದಿ ಅವರು ಅಲಹ್ಯ ಬಾಯಿ ಹೋಳ್ಕರ್ ಮಾದರಿಯಲ್ಲಿ ಕಟ್ಟಕಡೆಯ ಮನುಷ್ಯನಿಗೆ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಪಡಿತರ ವ್ಯವಸ್ಥೆಯ ಮೂಲಕ ಆಹಾರ ಧಾನ್ಯಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಅಹಲ್ಯ ಬಾಯಿ ಹೋಳ್ಕರ್ ಅವರನ್ನು ಮಾದರಿಯಾಗಿಟ್ಟುಕೊಂಡು ಉತ್ತಮ ಆಡಳಿತ ನೀಡುತ್ತಿದೆ. ಆದರೆ, ರಾಜ್ಯ ದಲ್ಲಿ ಕಾಂಗ್ರೆಸ್ ಸರ್ಕಾರ ದುರಾಡಳಿತದಲ್ಲಿ ತೊಡಗಿದೆ. ರಾಜ್ಯದಲ್ಲಿ ನೂರಾರು ಬಾಣಂತಿಯರು ಸಾವಿಗೀಡಾಗಿದ್ದಾರೆ. ಆ ಸಾವಿನ ಸಮಾಧಿ ಮೇಲೆ ರಾಜ್ಯ ಸರ್ಕಾರ 2 ವರ್ಷದ ಉತ್ಸವ ನಡೆಸಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆಯನ್ನು ಸರಿಯಾಗಿ ರೂಪಿಸಲಿಲ್ಲ. ಇದರ ಪರಿಣಾಮ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿ ಗಳು ಬಸ್ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್‌ನಲ್ಲಿ ಮಹಿಳೆಯರು ಜುಟ್ಟು ಹಿಡಿದುಕೊಂಡು ಜಗಳವಾಡುವ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಇದೇನಾ ನಿಮ್ಮ ಅಭಿವೃದ್ಧಿಯ ಮಾದರಿ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಸ್ತ್ರೀ ಶಕ್ತಿ ಸಂಘಗಳಿಗೆ 2 ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಇದರಿಂದ ಮಹಿಳೆಯರು ಉದ್ಯಮಿಗಳಾಗಿ ರೂಪುಗೊ ಳ್ಳುತ್ತಿದ್ದಾರೆ. ಸಾಕಷ್ಟು ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು. ಮಹಿಳೆಯರನ್ನು ಸಬಲೀಕ ರಗೊಳಿಸುತ್ತಿರುವ ನರೇಂದ್ರ ಮೋದಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ರಘು, ಕೇಬಲ್ ಮಹೇಶ್, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಪ್ರಫುಲ್ಲಾ ಮಲ್ಲಾಡಿ, ಜಿಲ್ಲಾಧ್ಯಕ್ಷೆ ರೇಣುಕಾ ರಾಜು, ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ , ಹಿರಿಯ ಕಾರ್ಯಕರ್ತೆಯರಾದ ಕಮಲ, ಶಾಂತ ಇದ್ದರು.