

ವಿಜಯಪುರ:ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು&ಹಂಪಲು ವಿತರಣೆ ಸೇರಿ ವಿವಿಧ ಸೇವೆಯ ರೂಪದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಿದರು.ಬಿಜೆಪಿ ನಗರ ಮಂಡಳ ವತಿಯಿಂದ ಇಲ್ಲಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ ಒಟ್ಟು 76 ಜನ ಕಾರ್ಯಕರ್ತರು ರಕ್ತದಾನ ಮಾಡಿ ತಮ್ಮ ನೆಚ್ಚಿನ ನಾಯಕನಿಗೆ ಶುಭಾಷಯ ಕೋರಿದರು.
ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಹಣ್ಣು&ಹಂಪಲು ವಿತರಿಸಿದರು.ಬಳಿಕ ಮಾತನಾಡಿದ ಸಂಸದ ಜಿಗಜಿಣಗಿ, ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ. ಕೇವಲ ಜನಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡು ಹೋರಾಟ, ದೇಶಭಕ್ತಿ ಮೂಲಕ ಈ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅವರ ಅವಧಿಯಲ್ಲಿ ಭಾರತ ಅಭಿವೃದ್ಧಿಯ ನಾಗಾಲೋಟ ಬೀರುತ್ತಿದೆ. ಮೊನ್ನೆಯಷ್ಟೇ ಜೀವನಾವಶ್ಯಕ ವಸ್ತುಗಳನ್ನು ಜಿಎಸ್ಟಿಯ ಪರಿಧಿಯಿಂದ ಹೊರಗಿಡುವ ಮೂಲಕ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಎಷ್ಟೋ ವರ್ಷಗಳ ಕನಸಾಗಿದ್ದ ರಾಮ ಮಂದಿರ ನಿರ್ಮಾಣ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ, ನೋಟು ರದ್ದತಿಗೊಳಿಸಿ ಕಪ್ಪು ಹಣದ ವಿರುದ್ಧ ಪ್ರಹಾರ, ಜನಸಾಮಾನ್ಯರಿಗೆ ತೆರಿಗೆ ಹೊರೆಯಿಂದ ಕಾಪಾಡಿದ್ದು ಮೋದಿ ಅವರ ಸಾಧನೆಗಳಲ್ಲಿ ಒಂದು. ಪದೇ ಪದೆ ಮಾನವೀಯತೆ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಉಗ್ರವಾದಿಗಳಿಗೆ ತಕ್ಕ ಪಾಠ ಕಲಿಸಿದ್ದು ಮೋದಿಜಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿದರು.
ಮೇಯರ್ ಎಂ.ಎಸ್. ಕರಡಿ, ಉಪ ಮೇಯರ್ ಸುಮಿತ್ರಾ ಜಾಧವ, ಪಕ್ಷದ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಮುಖಂಡರಾದ ವಿಜುಗೌಡ ಪಾಟೀಲ, ಪ್ರಕಾಶ ಅಕ್ಕಲಕೋಟ, ಡಾ. ಸುರೇಶ ಬಿರಾದಾರ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ರಾಜ್ಯ ಉಪಾಧ್ಯಕ್ಷ ಗೋಪಾಲ ಟಕಾಂಬಳೆ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವೂರ, ಮಲ್ಲಿಕಾರ್ಜುನ ಜೋಗುರ, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಣಿ ಸದಸ್ಯೆ ಮಲ್ಲಮ್ಮ ಜೋಗೂರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯೆ ಸ್ವಪ್ನಾ ಕಣಮುಚನಾಳ, ಪಾಪೂಸಿಂಗ ರಜಪೂತ, ಚಿನ್ನು ಚಿನಗುಂಡಿ, ವಿಜಯ ಜೋಶಿ ಮತ್ತಿತರರಿದ್ದರು.
ಪ್ರಧಾನಿ ನರೇಂದ್ರ ಮೋದಿಜಿ ಅವರ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ವಿಜಯಪುರದ ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ರಮೇಶ ಜಿಗಜಿಣಗಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ ಮತ್ತಿತರರಿದ್ದಾರೆ.