

ಯರಗಟ್ಟಿ: ಭಾರತ ದೇಶವನ್ನು ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ಬಿಜೆಪಿಗೆ ಮತ ನೀಡುವ ಮೂಲಕ ಬಲಿಷ್ಠ ಭಾರತ ಕಟ್ಟುವ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಇಲ್ಲಿನ ಎಂಜಿ ರಸ್ತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಎಲ್ಲ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ. ಸವದತ್ತಿ ಮತಕ್ಷೇತ್ರ ವ್ಯಾಪ್ತಿಯ ಸತ್ತಿಗೇರಿ ಏತ ನೀರಾವರಿ ಯೋಜನೆ ಶೀಘ್ರ ಅನುಷ್ಠಾನ ಮತ್ತು ನೂತನ ಯರಗಟ್ಟಿ ತಾಲೂಕಿಗೆ ಕಚೇರಿ ಸೇರಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ದಿ ಸುರೇಶ ಅಂಗಡಿ ಅವರ ಪತ್ನಿ ಮಂಗಲ ಅಂಗಡಿ ಅವರಿಗೆ ಮತ ನೀಡುವ ಮೂಲಕ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ವಿನಂತಿಸಿದರು.
ಅಭಿವೃದ್ಧಿಗೆ ಬೆಂಬಲಿಸಿ: ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಕಾಂಗ್ರೆಸ್‌ನವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ನೀರಾವರಿ ಯೋಜನೆಗಳಿಗೆ ಪ್ರಾಶಸ್ತ್ಯ ನೀಡುವ ಮೂಲಕ ರೈತರನ್ನು ಗಟ್ಟಿಗೊಳಿಸುತ್ತಿದ್ದಾರೆ ಎಂದರು. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ದಿ. ಸುರೇಶ ಅಂಗಡಿ ಅವರು ಒಂದು ವರ್ಷದ ಅವಧಿಯಲ್ಲಿ 57 ಸಾವಿರ ಕೋಟಿ ಅನುದಾನ ಬಳಕೆ ಮಾಡಿ ರೈಲ್ವೆ ಇಲಾಖೆಯಲ್ಲಿ ಬದಲಾವಣೆ ಮಾಡಿದ್ದನ್ನು ಕಂಡು ಸ್ವತಃ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರೂ ಸಹ ಭೂಮಿ ಒದಗಿಸುವ ಮೂಲಕ ಸಾಥ್ ನೀಡಿದ್ದರು. ಈಗ ಮತ್ತೊಮ್ಮೆ ಬೆಳಗಾವಿ ಸಮಗ್ರ ಅಭಿವೃದ್ಧಿಗಾಗಿ ಮಂಗಲ ಸುರೇಶ ಅಂಗಡಿ ಅವರಿಗೆ ಮತ ನೀಡಬೇಕು ಎಂದು ವಿನಂತಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅಭ್ಯರ್ಥಿ ಮಂಗಲ ಅಂಗಡಿ, ಸಚಿವ ಉಮೇಶ ಕತ್ತಿ, ಸಿ.ಸಿ.ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿದರು. ಸಚಿವ ಶ್ರೀಮಂತ ಪಾಟೀಲ, ಪಿ.ರಾಜು, ಹನುಮಂತ ನಿರಾಣಿ, ಶಶಿಕಾಂತ ನಾಯ್ಕ, ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ಮಂಡಲ ಅಧ್ಯಕ್ಷ ಈರಣ್ಣ ಚಂದರಗಿ ಇತರರು ಇದ್ದರು.
ಮುಖ್ಯಮಂತ್ರಿಗೆ ಮನವಿ: ಜಿಪಂ ಕ್ಷೇತ್ರದ ಮರು ವಿಂಗಡಣೆಯ ಸಂದರ್ಭದಲ್ಲಿ ಕದಾಂಪುರ (ಸಾಲಹಳ್ಳಿ) ಬದಲು ದಾ.ಸಾಲಾಪುರ ಎಂದು, ಸುರೇಬಾನ ಜಿಪಂ ಕ್ಷೇತ್ರ ಬದಲು ಮನಿಹಾಳ ಎಂದಾಗಿದ್ದು, ಅವುಗಳನ್ನು ಮೊದಲಿನ ಸಮೀಕ್ಷೆಯಂತೆ ಕದಾಂಪುರ, ಸುರೇಬಾನ ಜಿಪಂ ಕ್ಷೇತ್ರಗಳೆಂದಾಗುವಂತೆ ಮಾಡಬೇಕು. ಕಿತ್ತೂರ ಜವಳಹಳ್ಳ ಏತ ನೀರಾವರಿ ಸಂಪೂರ್ಣಗೊಳಿಸುವುದು, ನೆರೆ ಹಾವಳಿಗೆ ತುತ್ತಾದ ಮನೆಗಳಿಗೆ ಹಣ ನೀಡುವುದು. ನೆರೆ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸತ್ತಿಗೇರಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಲಾಗುವುದು. ಪೂರ್ಣ ಪ್ರಮಾಣದ ಸದ್ಬಳಕೆ ಆಗುವಂತೆ ಕಾಮಗಾರಿ ನಡೆಸಲು ಅಗತ್ಯ ಅನುದಾನ, ಯರಗಟ್ಟಿ ತಾಲೂಕಿಗೆ ಸಕಲ ಮೂಲಭೂತ ಸೌಕರ್ಯ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕರೊನಾ ಕಾಲದಲ್ಲಿ ಸರ್ಕಾರ ಕಷ್ಟ-ನಷ್ಟ ಅನುಭವಿಸಿದರೂ ರೈತರು, ನೇಕಾರರು ಹಾಗೂ ಎಲ್ಲ ರೀತಿಯ ಕಾರ್ಮಿಕರಿಗೂ ಸಹಾಯಧನ ನೀಡುವ ಮೂಲಕ ಸರ್ಕಾರ ಸ್ಪಂದಿಸಿದೆ. ಹಾಗಾಗಿ, ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರನ್ನು ಬಹುಮತದಿಂದ ಗೆಲ್ಲಿಸಬೇಕು. ಮತದಾರರು ಬಿಜೆಪಿ ಬೆಂಬಲಿಸಬೇಕು.| ಆನಂದ ಮಾಮನಿ ವಿಧಾನಸಭಾ ಉಪಸಭಾಧ್ಯಕ್ಷ