

ಹುಬ್ಬಳ್ಳಿ: ಸಂಸ್ಥೆಯ ಬಸ್ಗಳ ಸುಗಮ ಸಂಚಾರ ಹಾಗೂ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ದೇಶಿತ ರಾಣಿ ಚನ್ನಮ್ಮ ವೃತ್ತದ ಫ್ಲೈಓವರ್ ಯೋಜನೆಯಲ್ಲಿ ಅವಶ್ಯ ಮಾರ್ಪಾಡು ತರುವ ದಿಸೆಯಲ್ಲಿ ಅಧಿಕಾರಿಗಳೊಂದಿಗೆ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಗುರುವಾರ ಸ್ಥಳ ಪರಿಶೀಲಿಸಿ ರ್ಚಚಿಸಿದರು.
ಇಲ್ಲಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಬಿಆರ್ಟಿಎಸ್ ಕಾರಿಡಾರ್ ಮೇಲಿನ ಪಾದಚಾರಿ ಮೇಲ್ಸೇತುವೆ, ಹೊಸೂರು ವೃತ್ತ, ಬಸ್ ನಿಲ್ದಾಣದಿಂದ ವಾಣಿ ವಿಲಾಸ ವೃತ್ತದವರೆಗಿನ ರಸ್ತೆಗಳನ್ನು ಪರಿವೀಕ್ಷಣೆ ಮಾಡಿದ ನಂತರ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಹೊಸೂರು ಬಸ್ ನಿಲ್ದಾಣದಿಂದ ವಾಣಿ ವಿಲಾಸ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸುಗಮ ವಾಹನ ಸಂಚಾರಕ್ಕೆ ಬಿಟ್ಟುಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಅವರು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಪುನರ್ ನಿರ್ಮಾಣ ಕಾಮಗಾರಿಗಾಗಿ ಹಳೇ ಬಸ್ ನಿಲ್ದಾಣವನ್ನು ಬಿಟ್ಟು ಕೊಡಬೇಕಾದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಿಂದ ಸಂಚರಿಸುವ ಬಸ್ಗಳನ್ನು ಸ್ಥಳಾಂತರಿಸುವ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಯಿತು.
ಹೊಸೂರು ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಗರದ ವಿವಿಧ ಭಾಗಗಳಿಂದ ಸಂಪರ್ಕ ಸಾರಿಗೆ ಬಸ್ಗಳನ್ನು ಹೆಚ್ಚಿಸಬೇಕು. ಹೆಚ್ಚುವರಿಯಾಗಿ ಕುಡಿಯುವ ನೀರು, ಶೌಚಗೃಹ, ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳು ಮುಂತಾದ ಮೂಲ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಸ್ವಚ್ಚತೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಆರ್ಟಿಎಸ್ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೆರಿ, ನಗರಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಇತರರು ಇದ್ದರು.