ಖಜಾನೆ ಬರ್ಬಾದ್ ಮಾಡಿದ್ದೇ ಮೋದಿ

madhu bangarappa press meet
ಸಚಿವ ಮಧು ಬಂಗಾರಪ್ಪ ಮಾತನಾಡಿದರು.
Published on

ಶಿವಮೊಗ್ಗ: ಲೋಕಸಭಾ ಚುನಾವಣೆ ವೇಳೆ ಬಿಜೆಪಿಯವರು ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಮೋದಿ ಗ್ಯಾರಂಟಿ ಬರ್ಬಾದ್ ಆಗಲಿದೆ. ನಿಜವಾಗಿಯೂ ಈ ದೇಶದ ಖಜಾನೆ ಬರ್ಬಾದ್ ಮಾಡಿದ್ದೇ ಪ್ರಧಾನಿ ನರೇಂದ್ರ ಮೋದಿ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ವಿಧಾನಸಭೆ ಚುನಾವಣೆಗೆ ಐದು ಗ್ಯಾರಂಟಿ ಮೂಲಕ ಮತದಾರರ ಬಳಿ ಹೋದೆವು. ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಇದೀಗ ಸಾಕಷ್ಟು ಗ್ಯಾರಂಟಿಗಳು ಬರುತ್ತಿವೆ.
ಈ ಬಾರಿಯೂ ಮೋದಿ ಹೆಸರಿನಲ್ಲಿ ಚುನಾವಣೆ ಗೆಲ್ಲುತ್ತೇವೆಂಬ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಘವೇಂದ್ರ ಅವರು ಕಳೆದ ಬಾರಿ ಮೋದಿ ಹೆಸರಿನಲ್ಲಿ ಗೆದ್ದು ಸಂಸದರಾದರು. ಈ ಬಾರಿ ಅವರ ಯಾವ ಆಟವೂ ನಡೆಯಲ್ಲ. ರಾಮನನ್ನು ಬೀದಿಗೆ ತಂದರು. ಶಿವಮೊಗ್ಗದಲ್ಲಿ ರಾಗಿಗುಡ್ಡವನ್ನು ರಾಜಕಾರಣದಲ್ಲಿ ಕೋಮುದಳ್ಳುರಿಯಾಗಿ ಮಾಡಲು ಯತ್ನಿಸಲಾಯಿತು. ಅದನ್ನು ನಾವು ತಡೆದಿದ್ದೇವೆ ಎಂದರು.
ಸಂಸದರಾಗಿರುವ ಬಿ.ವೈ.ರಾಘವೇಂದ್ರ ಅವರು 10 ವರ್ಷ ಕಾಲಹರಣ ಮಾಡಿದ್ದಾರೆ. ಶರಾವತಿ ಸಂತ್ರಸ್ತರ ಬಗ್ಗೆ ಸಂಸತ್‌ನಲ್ಲಿ ಒಂದೇ ಒಂದು ದಿನ ಧ್ವನಿ ಎತ್ತಲಿಲ್ಲ. ಜಲಜೀವನ್ ಮಿಷನ್‌ನಡಿ ಶೇ. 60 ಹಣ ಕೊಡುವುದು ಯಾರು? ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾರ ಹಣ ಬಳಕೆ ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ಕಳೆದ ಬಾರಿ ರಾಘವೇಂದ್ರ ಯಾವ ರೀತಿ ಗೆದ್ದರು ಎಂಬುದು ಗೊತ್ತಿದ್ದು ಸಾಮಾನ್ಯ ಜನರ ಧ್ವನಿಯಾಗುವುದೇ ಈ ಬಾರಿಯ ಚುನಾವಣೆ ಉದ್ದೇಶ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net