ಶರಣರ ನೆಲದಿಂದ ಮೋದಿ ರಣಕಹಳೆ

Narendra Modi
Published on

ಕಲಬುರಗಿ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಕೋಟೆ ಕಲಬುರಗಿಯಿಂದ ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸಲಿದ್ದು, ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಶನಿವಾರ ಮಧ್ಯಾಹ್ನ ೨ಕ್ಕೆ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೀದರ್, ಕಲಬುರಗಿ ಲೋಕಸಭೆ ವ್ಯಾಪ್ತಿಯ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದು, ಮೋದಿ ಭೇಟಿ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಬಿಜೆಪಿ ಧ್ವಜಗಳನ್ನು ಕಟ್ಟಿ, ಶೃಂಗರಿಸಿದ್ದು, ಲಕ್ಷಾಂತರ ಜನರನ್ನು ಸೇರಿಸಲು ಬಿಜೆಪಿ ಯೋಜನೆ ರೂಪಿಸಿದೆ.

ನೂತನ ವಿದ್ಯಾಲಯ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬುಧವಾರದಿಂದಲೇ ರಕ್ಷಣಾ ತಂಡಗಳು ನಗರಕ್ಕೆ ಬಂದಿಳಿದಿದ್ದು, ಮೋದಿ ಸಂಚರಿಸುವ ಪೊಲೀಸ್ ಪರೇಡ್ ಮೈದಾನ, ಐನಾಕ್ಸ್ ಮಾಲ್, ರಂಗಮAದಿರ, ರೋಟರಿ ಕ್ಲಬ್ ಶಾಲೆ ಮಾರ್ಗದಲ್ಲಿ ಎಸ್‌ಪಿಜಿ ಸೇರಿ ವಿವಿಧ ಭದ್ರತಾ ತಂಡದವರು ಪರಿಶೀಲನೆ ನಡೆಸಿವೆ.

ಮಂಡಲ, ಬೂತ್ ಮಟ್ಟದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಿ, ಪ್ರತಿ ಹಳ್ಳಿಗಳಿಂದ ಜನರನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ. ವಿಧಾನಸಭೆ ಕ್ಷೇತ್ರವಾರು ತಂಡಗಳನ್ನು ರಚಿಸಿ, ವಾಹನ, ಊಟ ಸೇರಿ ಎಲ್ಲ ಸೂಚನೆ ನೀಡಲಾಗಿದೆ.

ಗ್ಯಾರಂಟಿ ಸಮಾವೇಶದ ಮೂಲಕ ಪರೋಕ್ಷವಾಗಿ ಚುನಾವಣೆ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಇನ್ನು ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ ಬಿಜೆಪಿ ಕಲಬುರಗಿಗೆ ಉಮೇಶ ಜಾಧವ್, ಬೀದರ್‌ಗೆ ಕೇಂದ್ರ ಸಚಿವ ಭಗವಂತ್ ಖೂಬಾಗೆ ಟಿಕೆಟ್ ಘೋಷಿಸಿದ್ದು, ಉಭಯ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಮೋದಿ ಸಮಾವೇಶ ರೂಪಿಸಲಾಗಿದೆ.

ವೇದಿಕೆಯಲ್ಲಿ ೪೦ ಜನ: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ವೇದಿಕೆಯಲ್ಲಿ ಮೋದಿ ಹೊರತುಪಡಿಸಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿ ಪಕ್ಷ ನಾಯಕ ಆರ್.ಅಶೋಕ, ಅಭ್ಯರ್ಥಿಗಳಾದ ಭಗವಂತ ಖೂಬಾ, ಡಾ.ಉಮೇಶ ಜಾಧವ್ ಸೇರಿ ಎರಡು ಲೋಕಸಭೆ ಕ್ಷೇತ್ರದ ಬಿಜೆಪಿ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆರು ಮಹಿಳೆಯರಿಗೆ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ.

  • ಮೋದಿ ಟೈಮ್ ಟೇಬಲ್
  • ೧.೩೦ಕ್ಕೆ ಕಲಬುರಗಿ ವಿಮಾನ ನಿಲ್ದಾಣ
  • ೧.೩೫ಕ್ಕೆ ಡಿಎಆರ್ ಪೊಲೀಸ್ ಹೆಲಿಪ್ಯಾಡ್
  • ೧.೪೦ಕ್ಕೆ ಸೆಮಿ ರೋಡ್ ಶೋ ಆರಂಭ
  • ೨ ಗಂಟೆಗೆ ವೇದಿಕೆಗೆ ಆಗಮನ
  • ೩ ಗಂಟೆಗೆ ವೇದಿಕೆಯಿಂದ ನಿರ್ಗಮನ
  • ೩.೧೦ಕ್ಕೆ ವಿಮಾನ ನಿಲ್ದಾಣದಿಂದ ಪ್ರಯಾಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net