ಶಕ್ತಿಯುತ ಭಾರತ ಕಟ್ಟುವುದೇ ನಮ್ಮ ಗುರಿ: ಮೋದಿ ಮಿಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಗಿರೀಶ್‌ರಾಜ್ ಹೇಳಿಕೆ

2
Published on

ಮಂಡ್ಯ: ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದರ ಜತೆಗೆ ಆ ಮೂಲಕ ವಸುದೈವ ಕುಟುಂಬಕಂ ಎಂಬ ರೀತಿಯಲ್ಲಿ ಶಕ್ತಿಯುತ ಭಾರತ ಕಟ್ಟುವುದು ನಮ್ಮ ಗುರಿ ಎಂದು ಮೋದಿ ಮಿಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಗಿರೀಶ್‌ರಾಜ್ ತಿಳಿಸಿದರು.

ಪ್ರತಿ ಮನೆಯಲ್ಲೂ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ರೀತಿ ನಾಯಕತ್ವ ಬೆಳೆಸಬೇಕಿದೆ. ಮಾತ್ರವಲ್ಲದೆ ದೀರ್ಘಕಾಲದ ಕಾರ್ಯಕ್ರಮದಂತೆ ಪ್ರತೀ ಭಾರತೀಯರಿಗೂ ಆರೋಗ್ಯ, ವಿದ್ಯೆ, ಉದ್ಯೋಗ, ಸುರಕ್ಷತೆ, ಸ್ವಚ್ಛತೆ, ಗೋ ಸೇವೆ, ಸಾವಯವ ಕೃಷಿ, ಪ್ರತಿ ಹಳ್ಳಿಗಳಿಗೂ ರಸ್ತೆ, ವಸತಿ, ಶುದ್ಧ ಕುಡಿಯುವ ನೀರು ಮತ್ತು ಸಂಪೂರ್ಣ ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶ ಹೊಂದಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾರತ ಶಕ್ತಿಯುತ ರಾಷ್ಟ್ರವಾಗಿದ್ದರೂ ವಿಶ್ವಮಾನವರಾಗಿ ಬಾಳುವುದನ್ನು ವಿಶ್ವಗುರುವಾಗಿ ತೋರಿಸುವ ಉದ್ದೇಶವೇ ಮಿಷನ್ ಮೋದಿಯ ಮೂಲ ಧ್ಯೇಯವಾಗಿದೆ. ಇದನ್ನು ಪ್ರತಿ ಮನೆಗೆ ತಲುಪಿಸುವುದು. ಇದರೊಂದಿಗೆ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಉದ್ದೇಶ. ನಾಯಕತ್ವ ಗುಣ ಹೊಂದಿರುವವರು ಯಾರೇ ಆದರೂ ನಮ್ಮ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಹುದು. ಇದಕ್ಕೆ ಪಕ್ಷ, ಜಾತಿ, ಧರ್ಮದ ಸೋಂಕಿಲ್ಲ. ನಾವು ಭಾರತೀಯತೆಯನ್ನು ಮಾತ್ರ ಪ್ರತಿಪಾದಿಸುತ್ತಿದ್ದೇವೆ. ಕಳೆದ 8 ವರ್ಷದಿಂದ ನಮ್ಮ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಇದೀಗ ತಳ ಮಟ್ಟದಲ್ಲೂ ಬಲಿಷ್ಠಗೊಳಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಮೋದಿ ಮಿಷನ್ ಜಿಲ್ಲಾಧ್ಯಕ್ಷ ಡಾ.ಕಪನಿಗೌಡ ಮಾತನಾಡಿ, ಗೋ ಆಧಾರಿತ ಸಾವಯವ ಕೃಷಿ ಬಿಟ್ಟು ರಾಸಾಯನಿಕ ಕೃಷಿಗೆ ಮಾರೋಹೋಗಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಂಡಿದ್ದೇವೆ. ನಾನು ವೈದ್ಯಕೀಯ ಪದವಿ ಪಡೆಯುವ ಕಾಲಘಟ್ಟದಲ್ಲಿ ಡಯಾಲಿಸಿಸ್ ಶಬ್ಧವನ್ನೇ ಕೇಳಿರಲಿಲ್ಲ. ಆದರೆ ಈಗ ಅದು ಸಾಮಾನ್ಯವಾಗಿಬಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಡೆಸಲಾಗುತ್ತಿದೆ. ಇದೀಗ ಹೋಬಳಿ ಮಟ್ಟದಲ್ಲೂ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಜನಸಾಮಾನ್ಯರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಿರುವುದೇ ಇದಕ್ಕೆ ಕಾರಣವಾಗಿದೆ. ನಾವು ತಿನ್ನುವ ಪ್ರತಿಯೊಂದು ಆಹಾರವೂ ರಾಸಾಯನಿಕಯುಕ್ತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಹಣ್ಣುಗಳನ್ನು ಕೊಳ್ಳುವುದಿಲ್ಲ. ನಮ್ಮಲ್ಲಿ ಬೆಳೆಯುವ ಮಾವಿನ ಹಣ್ಣುಗಳು ವಿದೇಶಕ್ಕೆ ರ‌್ತಾಗುವುದಿಲ್ಲ. ಕಾರಣ ಅದಕ್ಕೆ ಕ್ರಿಮಿನಾಶ, ರಾಸಾನಿಯಕ ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಅದರಲ್ಲಿ ರಾಸಾಯನಿಕ ಅಂಶವಿದೆ. ಅದ್ದರಿಂದ ತಿರಸ್ಕೃತವಾಗುತ್ತದೆ ಎಂದರು.

ಜಿಲ್ಲಾ ಕಾರ್ಯದರ್ಶಿಗಳಾದ ಶಿವಕೆಂಪಯ್ಯ, ಹೇಮಾ, ಮಾಧ್ಯಮ ಸಂಚಾಲಕಿ ರೇಖಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net