

ಉಡುಪಿ: ಜಿಲ್ಲೆಯಲ್ಲಿ ಸುಮಾರು 20 ಸಾವಿರ ಕೇಂದ್ರ ಸರ್ಕಾರದ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಮಂಗಳೂರಿನಲ್ಲಿ ಸೆ.2ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫಲಾನುಭವಿಗಳನ್ನು ಕರೆದುಕೊಂಡು ಹೋಗಲು ಪ್ರತೀ ಪಂಚಾಯಿತಿಗೆ 2 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. 12 ಗಂಟೆಯೊಳಗೆ ಕೂಳೂರು ತಲುಪಬೇಕಿದ್ದು, ಸಮಾವೇಶ ಮುಗಿಸಿ ವಾಪಾಸು ಬರುವಾಗ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಶಕ್ತಿಕೇಂದ್ರ ಹಾಗೂ ಮಹಾಶಕ್ತಿಕೇಂದ್ರಗಳಲ್ಲಿ ಸಭೆ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಬರುವ ಜನರ ಪಟ್ಟಿಯನ್ನು ನೀಡಲಾಗಿದೆ. ಪ್ರಧಾನಿ ಭಾಗವಹಿಸುವ ಸರ್ಕಾರಿ ಕಾರ್ಯಕ್ರಮದಲ್ಲಿ ಫಲಾನುಭವಿಗಳನ್ನು ಗುರುತಿಸುವ ಕೆಲಸವನ್ನು ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು.
ಸಾವರ್ಕರ್ ಚಿತ್ರಕ್ಕೆ ನಮನ
ಈ ಬಾರಿ ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವಂತೆ ಆಯೋಜಕರಿಗೆ ಮನವಿ ಮಾಡಲಾಗಿದೆ. ಉತ್ತಮ ಸ್ಪಂದನೆ ದೊರೆತಿದೆ. ಸಾವರ್ಕರ್ ಹೋರಾಟ, ಜೀವನಾದರ್ಶಗಳ ಮಾಹಿತಿಯನ್ನೊಳಗೊಂಡಿರುವ ಪುಸ್ತಕಗಳನ್ನು ಮಾರಾಟ ಮಳಿಗೆ ತೆರೆಯುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಯುವ ಸಮುದಾಯಕ್ಕೆ ಸಾವರ್ಕರ್ ದೇಶ ಪ್ರೇಮ, ಚಿಂತನೆ, ಹೋರಾಟ, ತ್ಯಾಗ, ಬಲಿದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜುಗಳಲ್ಲಿ ವಿಚಾರ ಸಂಕಿರಣ ನಡೆಸಲಾಗುವುದು. ವಿರೋಧ ಪಕ್ಷಗಳು ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟದ ನೈಜ ವಿಚಾರ ಅರಿತುಕೊಂಡು ಕ್ಷುಲ್ಲಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.
ಭಾರತವನ್ನು ತುಂಡು ಮಾಡಿರುವ ಕಾಂಗ್ರೆಸ್ ಪಕ್ಷ ಇದೀಗ ಭಾರತ್ ಜೋಡೋ ಪಾದಯಾತ್ರೆ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ಪಕ್ಷವನ್ನು ತೊರೆದು ತಂಡೋಪತಂಡವಾಗಿ ಹೊರ ಹೋಗುತ್ತಿರುವ ಮುಖಂಡರನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಕಾಂಗ್ರೆಸ್ ಜೋಡೋ ಅಭಿಯಾನ ನಡೆಸುವುದು ಉತ್ತಮ ಎಂದು ಕುಯಿಲಾಡಿ ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶನಾಯಕ್, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕರ್ ಉಪಸ್ಥಿತರಿದ್ದರು.