ದೇಶ ಅಭಿವೃದ್ಧಿಯತ್ತ ಸಾಗಲು ಮೋದಿ ಕಾರಣ

h12-railway
Published on

ಹುಬ್ಬಳ್ಳಿ: ವಿಕಸಿತ ಭಾರತ ಕಲ್ಪನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೊರಟಿದ್ದಾರೆ. ಅವರ ಅವಿರತ ಶ್ರಮ, ಧ್ಯೇಯ ಶ್ಲಾಘನೀಯ ಎಂದು ರಾಜ್ಯಪಾಲ ಥಾವರಚೆಂದ್ ಗೆಹಲೋತ್ ಹೇಳಿದರು.
ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯ 5142 ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು, ರೈಲು ನಿಲ್ದಾಣದಲ್ಲಿ ಆರಂಭಿಸಿದ ಜನೌಷಧಿ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಮೋದಿ ಅವರು ಒಂದೇ ದಿನ 85 ಸಾವಿರ ಕೋಟಿ ರೂ. ವೆಚ್ಚದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ 10 ವಂದೇಭಾರತ್ ನೂತನ ರೈಲುಗಳಿಗೆ ಚಾಲನೆ ನೀಡಿದ್ದಾರೆ. ದೇಶದಲ್ಲಿ ಭಾರತೀಯ ರೈಲ್ವೆ ಮುಖ್ಯ ಸಾರಿಗೆ ವಿಧಾನ. ಇದು ದೇಶದ ಆರ್ಥಿಕ ಮತ್ತು ಸರ್ವತೋಮುಖ ಅಭಿವೃದ್ಧಿಯ ಬೆನ್ನೆಲುಬಾಗಿದೆ ಎಂದರು.
ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ, ಹೊಸ ಮಾರ್ಗ, ಗತಿಶಕ್ತಿ ಮಲ್ಟಿ ಕಾರ್ಗೋ ಟರ್ಮಿನಲ್, ಗೂಡ್ಸ್‌ಶೆಡ್, ಒಂದು ನಿಲ್ದಾಣ ಒಂದು ಉತ್ಪನ್ನ ಸ್ಟಾಲ್ ಮತ್ತು ಜನೌಷಧಿ ಕೇಂದ್ರವನ್ನು ಜನರಿಗೆ ಸಮರ್ಪಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 4 ವಂದೇಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಇಂದು ರಾಜ್ಯಕ್ಕೆ ಮತ್ತೆರಡು ವಂದೇಭಾರತ್ ರೈಲುಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ಪ್ರಶಂಸನೀಯ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಸಣ್ಣ ಸಣ್ಣ ಹಳ್ಳಿಗಳ ಜನರೂ ರೈಲಿನಲ್ಲಿ ಸಂಚರಿಸುವಂಥ ಸೌಲಭ್ಯ ಕಲ್ಪಿಸಿದ್ದಾರೆ. ಗುಣಮಟ್ಟದ ರೈಲು ನಿರ್ಮಾಣ ಮಾಡುವ ಮೂಲಕ ಜನರಿಗೆ ನೆಮ್ಮದಿಯ ಸಂಚಾರದ ಅವಕಾಶ ನೀಡಿದ್ದಾರೆ. ದೇಶ ಪ್ರಗತಿ ಹೊಂದಲು ನಾಯಕನಾದವನು ಉತ್ತಮನಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 2014ರ ಪೂರ್ವದಲ್ಲಿ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಬರಲು ಹಿಂಜರಿಯುತ್ತಿದ್ದರು. ಮೋದಿ ಅವರು ಪ್ರಧಾನಿ ಆದ ಬಳಿಕ ಚಿತ್ರಣವನ್ನೇ ಬದಲಿಸಿದ್ದಾರೆ. ವಿಮಾನ ನಿಲ್ದಾಣಗಳ ಮಾದರಿಯಲ್ಲಿ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ಶಾಸಕ ಎಂ.ಆರ್. ಪಾಟೀಲ, ಪಾಲಿಕೆ ಮೇಯರ್ ವೀಣಾ ಬರದ್ವಾಡ, ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷಾ ಖರೆ, ಅಧಿಕಾರಿಗಳಾದ ಕೆ.ಎಸ್. ಜೈನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net