ಒಕ್ಕೂಟ ವ್ಯವಸ್ಥೆಯಲ್ಲಿ ಮೋದಿ ಸುಪ್ರೀಂ ಅಲ್ಲ

pm modi
Published on

ಮೈಸೂರು: ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ಸುಪ್ರೀಂ ಅಲ್ಲ, ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗೂ ಸಂವಿಧಾನಬದ್ಧ ಅಧಿಕಾರವಿದೆ. ಪ್ರಧಾನಿ ಪ್ರಶ್ನಾತೀತರಲ್ಲ, ಅವರನ್ನು ಪ್ರಶ್ನಿಸುವ ಹಕ್ಕು ಪ್ರತಿ ಪ್ರಜೆಗೂ ಇದೆ ಎಂದು ಕರ್ನಾಟಕ ಬುದ್ಧ ದಮ್ಮ ಸಮಿತಿ ಕಾರ್ಯದರ್ಶಿ ಆರ್.ಮಹದೇವಪ್ಪ ಹೇಳಿದರು.

ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಪ್ರಯುಕ್ತ ಬುಧವಾರ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ‘ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಧೋರಣೆ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, 6 ಕೋಟಿ ಜನರ ಮುಖ್ಯಮಂತ್ರಿ ಸಿದ್ದರಾಮಯ್ಯ 150 ಕೋಟಿ ಜನರ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ ನೀಡಿರುವುದು ಸರಿಯಲ್ಲ. ಪ್ರಧಾನಿಯೇನೂ ರಾಜನಲ್ಲ, ಮುಖ್ಯಮಂತ್ರಿ ಮಾಂಡಳೀಕನಲ್ಲ. ಈ ವಿಚಾರ ದೇವೇಗೌಡರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ವಿರುದ್ಧ ಮಾತನಾಡಲು ಬಿಜೆಪಿ ಮುಖ್ಯಮಂತ್ರಿಗಳು ನಡುಗುತ್ತಿದ್ದಾರೆ. ಅದೇ ರೀತಿ ಉಳಿದ ಮುಖ್ಯಮಂತ್ರಿಗಳು ನಡುಗಬೇಕು ಎಂಬುದು ಬಿಜೆಪಿಯ ಬಯಕೆಯಾಗಿದ್ದು, ಇದು ಸರ್ವಾಧಿಕಾರಿ ಧೋರಣೆಯಾಗಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ಕೇವಲ ಕಾರ್ಯಾಂಗದ ಮುಖ್ಯಸ್ಥರಷ್ಟೇ. ಅವರು ಶಾಸಕಾಂಗ, ನ್ಯಾಯಾಂಗಕ್ಕೆ ಮುಖ್ಯಸ್ಥರಲ್ಲ. ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಬೇಕು ಎಂದರು.

ಚಿಂತಕ ದಿಲೀಪ್ ನರಸಯ್ಯ ಮಾತನಾಡಿ, ದೇಶದಲ್ಲಿ ಸಂವಿಧಾನದ ಆಶಯಗಳನ್ನು ವ್ಯವಸ್ಥಿತವಾಗಿ ದಮನ ಮಾಡಲಾಗುತ್ತಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರೃವನ್ನು ಹತ್ತಿಕ್ಕಲಾಯಿತು. 2020ರಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು ಗುರುಕುಲ ಶಿಕ್ಷಣವನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನವನ್ನು ಜನರು ಅರಿಯದಿದ್ದರೆ ಸರ್ವಾಧಿಕಾರ ಜಾರಿಗೊಳ್ಳುತ್ತದೆ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಬಹಳ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರು ಸಂವಿಧಾನವನ್ನು ಅರಿಯಬೇಕು. ಆ ಮೂಲಕ ಸಂವಿಧಾನವನ್ನು ಉಳಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣಿತರು ಹಾಗೂ ತಜ್ಞರನ್ನು ನೇಮಕ ಮಾಡಿಕೊಳ್ಳಲು 2018ರಲ್ಲಿ ನೇರ ನೇಮಕ ಮಾಡಿಕೊಳ್ಳುವ ಕ್ರಮ (ಲ್ಯಾಟೆರೆಲ್ ಎಂಟ್ರಿ) ಜಾರಿಗೊಳಿಸಲಾಗಿದೆ. ಇದರಿಂದ ಆಡಳಿತ ವ್ಯವಸ್ಥೆ ಮೇಲೂ ಆರ್‌ಎಸ್‌ಎಸ್ ತನ್ನ ಹಿಡಿತ ಸಾಧಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದೇಶಿ ಹಣ ನಿಯಂತ್ರಣ ಕಾಯ್ದೆ ಜಾರಿಗೊಳಿಸಿ ಸಾಮಾಜಿಕ ಸ್ವಯಂ ಸೇವಾ ಸಂಸ್ಥೆಗಳಿಗೆ ಹರಿದು ಬರುತ್ತಿದ್ದ ಹಣಕ್ಕೆ ತಡೆ ಒಡ್ಡಲಾಗಿದೆ. ಕ್ರೈಸ್ತ ಎನ್‌ಜಿಒಗಳನ್ನು ಗುರಿಯಾಗಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಕ್ರಮದಿಂದ ಒಂದು ದಶಕದಲ್ಲಿ ಸಾವಿರಾರು ಎನ್‌ಜಿಒಗಳು ಮುಚ್ಚಿವೆ. ಇದರಿಂದ ಎನ್‌ಜಿಒಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಲಿತರು, ಬಡ ವರ್ಗದವರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿಂತಕ ಎಲ್ .ವಿಜಯಕುಮಾರ್, ದಸಂಸ ಪದಾಧಿಕಾರಿಗಳಾದ ಚೋರನಹಳ್ಳಿ ಶಿವಣ್ಣ, ಡಾ.ಆಲಗೂಡು ಚಂದ್ರಶೇಖರ್, ಶಿವಕುಮಾರ್, ಚಾ. ಶಿವಕುಮಾರ್, ಕೆ.ವಿ.ದೇವೇಂದ್ರ, ಶಿವಮೂರ್ತಿ ಶಂಕರಪುರ, ಕಿರಂಗೂರುಸ್ವಾಮಿ, ನಟರಾಜ್ ಹಾರೋಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net