ಮೋದಿ ಪ್ರಧಾನಿಯಲ್ಲ ಪ್ರಧಾನ ಸುಳ್ಳುಗಾರ

IMG-20240428-WA0013 (1)
Published on

ರಾಯಚೂರು: ನರೇಂದ್ರ ಮೋದಿ ಪ್ರಧಾನಿಯಲ್ಲ ಪ್ರಧಾನ ಸುಳ್ಳುಗಾರನಾಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಹೇಳಿದರು.
ಸ್ಥಳೀಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಜನರಿಗೆ ಅಚ್ಚೇ ದಿನ್ ತರುತ್ತೇನೆ. ಬಲೆ ಏರಿಕೆ ನಿಯಂತ್ರಣ ಮಾಡುತ್ತೇನೆ ಎಂದು ಹೇಳಿ ಹತ್ತು ವರ್ಷಗಳಲ್ಲಿ ಅದಾವುದನ್ನು ಮಾಡಲಿಲ್ಲ. ಅವರದ್ದು ಅಮೃತ ಕಾಲವಲ್ಲ ಅನ್ಯಾಯದ ಕಾಲವಾಗಿದೆ ಎಂದರು.
ಬಿಜೆಪಿಯ ಚುನಾವಣೆ ಪ್ರಣಾಳಿಕೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ್ದೇನು, ಮುಂದಿನ ಐದು ವರ್ಷಗಳಲ್ಲಿ ಮಾಡುವುದೇನು ಎಂಬುದಿಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತ್ತಿದ್ದಾರೆ. ಆದರೆ ಕಾಂಗ್ರೆಸ್ ರೈತರು, ಕಾರ್ಮಿಕರು, ಮಹಿಳೆಯರು, ಯುವಕರಿಗೆ ಏನೂ ಮಾಡುತ್ತೇವೆ ಎಂದು ಐದು ನ್ಯಾಯ ಪತ್ರಗಳನ್ನು ನೀಡಿದ್ದೇವೆ.
ಮುಸ್ಲಿಂ ಸಮುದಾಯಕ್ಕೆ ಮೀಸಲು ಮೊದಲಿನಿಂದಲೂ ಹಿಂದುಳಿದ ವರ್ಗದಲ್ಲಿದೆ. ಗುಜರಾತ್‌ನಲ್ಲಿಯೂ ಮುಸ್ಲಿಮರು ಹಿಂದುಳಿದ ವರ್ಗದಲ್ಲಿದ್ದಾರೆ. ರಾಷ್ಟ್ರೀಯ ಹಿಂದುಳಿದ ಆಯೋಗದ ಅಧ್ಯಕ್ಷರು ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಾಗುವುದು.
ಬಡ ಮಹಿಳೆಯರಿಗೆ ವರ್ಷಕ್ಕೆ ಲಕ್ಷ ರೂ. ನೀಡುವುದರಿಂದ ಯಾವುದೇ ಹೊರೆಯಿಲ್ಲ. ಪ್ರಧಾನಿ ಮೋದಿ ಹಿಂದೆ ಬಂಡವಾಳಶಾಹಿಗಳ 16.50 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದು, ಆ ಹಣದಲ್ಲಿಯೇ ಮಹಿಳೆಯರಿಗೆ ಲಕ್ಷ ರೂ. ನೀಡಬಹುದಾಗಿದೆ. ಪ್ರಧಾನಿ ಮೋದಿ ಗ್ಯಾರಂಟಿಗೆ ವಾರಂಟಿಯಿಲ್ಲ. ಅದು ಚೀನಾ ಸಾಮಗ್ರಿಯಿದ್ದಂತೆ.
ಪಿತ್ರಾರ್ಜಿತ ಆಸ್ತಿಗೆ ಸಂಬಂಸಿದಂತೆ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಕಾಂಗ್ರೆಸ್ ಯಾವಾಗಳು ತೆರಿಗೆ ಹಣವನ್ನು ಎಲ್ಲರಿಗೂ ಸಮಾನವಾಗಿ ಹಂಚುವ ಕೆಲಸ ಮಾಡುತ್ತಿದೆ ಹೊರತು ಸ್ಥಿತಿವಂತರಿಂದ ಕಸಿದುಕೊಳ್ಳುವ ವಿಚಾರವನ್ನಿಟ್ಟುಕೊಂಡಿಲ್ಲ ಎಂದು ಬಿ.ಕೆ.ಹರಿಪ್ರಸಾದ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಪದಾಕಾರಿಗಳಾದ ಪಾರಸಮಲ್ ಸುಖಾಣಿ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಜಿ.ಬಸವರಾಜ ರೆಡ್ಡಿ, ಮಹ್ಮದ್ ಶಾಲಂ, ರಾಜಶೇಖರ ರಾಮಸ್ವಾಮಿ, ತಾಯಣ್ಣ ನಾಯಕ, ಜಿ.ಶಿವಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net