

ಬೆಂಗಳೂರು: ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಬುಧವಾರ ಚಾಲನೆ ನೀಡಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೆಪಿಸಿಸಿಯಿಂದ ಯುವ ಕಾಂಗ್ರೆಸ್‌ಗೆ ಪ್ರತ್ಯೇಕ ತರಬೇತಿ ನೀಡುವುದರ ಜತೆಗೆ ಪ್ರತಿ ಬೂತ್‌ಗೆ ಐದು ಯುವಕರ ಪಡೆ ಕಟ್ಟುವ ‘ಈಚ್ ಬೂತ್ ಫೈವ್ ಯೂತ್’ ಎಂಬ ವಿನೂತ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.
ಕ್ಷದ ಯುವ ಘಟಕ ಕಾಂಗ್ರೆಸ್‌ನ ಆಧಾರ ಸ್ತಂಭ. ಕಳೆದ 60 ವರ್ಷಗಳಿಂದಲೂ ಅತಿ ಬಲಿಷ್ಠ ಸಂಘಟನೆಯಾಗಿ ಬೆಳೆದಿದ್ದು, ಸಾಕಷ್ಟು ನಾಯಕರು ಈ ಘಟಕದ ಮೂಲಕವೇ ಬೆಳೆದು ಉತ್ತಮ ಜವಾಬ್ದಾರಿ ವಹಿಸಿಕೊಂಡು ರಾಜ್ಯ, ರಾಷ್ಟ್ರಮಟ್ಟದ ನಾಯಕರಾಗಿದ್ದಾರೆ. ಈಗಿನ ವಾತಾವರಣದಲ್ಲಿ ಯುವ ಕಾಂಗ್ರೆಸ್ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆಂದು ಭರವಸೆ ನೀಡಿದ್ದರು. ಕಳೆದ 6 ವರ್ಷಗಳಲ್ಲಿ 12 ಕೋಟಿ ಉದ್ಯೋಗ ನೀಡಬೇಕಾಗಿತ್ತು. ಕನಿಷ್ಠ 12 ಲಕ್ಷ ಉದ್ಯೋಗ ಕೂಡ ನೀಡಿಲ್ಲ. ಮೋದಿ ಸರ್ಕಾರ ಯುವಕರಿಗೆ ಸುಳ್ಳು ಆಶ್ವಾಸನೆ ನೀಡುವ ಮೂಲಕ ಉದ್ಯೋಗ ನೀಡದೆ ಪಕೋಡಮಾರಿ ಜೀವನ ಮಾಡಿ ಹೇಳಿಕೆ ನೀಡಿ ಮೋಸ ಮಾಡಿದ್ದಾರೆ ಎಂದು ಟೀಕಿಸಿದರು.
ವರ್ಚುವಲ್ ಆಗಿ ಪಾಲ್ಗೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಶುಭಕೋರಿದರು. ಈ ವೇಳೆ, ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.