ಪೆಹಲ್ಗಾಮ್ ದಾಳಿಗೆ ಪಾಕಿಸ್ತಾನಕ್ಕೆ ಮೋದಿ ತಕ್ಕ ಉತ್ತರ ನೀಡಿದ್ದಾರೆ

yaduveer
Published on

ಮೈಸೂರು: ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರು ಭಾರತೀಯರನ್ನು ಹತ್ಯೆ ಮಾಡಿದ ಘಟನೆಗೆ ಪ್ರಧಾನಿ ನರೇಂದ್ರಮೋದಿ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ. 9 ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ಸೇನೆ ಗುರುತಿಸಿ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಏನೇ ಪ್ರಯತ್ನ ಮಾಡಿದರೂ ಅವರ ಪ್ರಯತ್ನಗಳನ್ನು ಮೊಟುಕುಗೊಳಿಸುವ ಕೆಲಸವನ್ನು ಭಾರತ ಸರ್ಕಾರ ಮಾಡೀಯೇ ತೀರುತ್ತದೆ. ಪಾಕಿಸ್ತಾನದ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಭಯೋತ್ಪಾದನೆಗೆ ಅವಕಾಶ ಕೊಡದೆ ವಿಶ್ವದಾದ್ಯಂತ ಉಗ್ರವಾದ ತೊಲಗಿಸಬೇಕು. ಪಾಕಿಸ್ತಾನೀಯರು ಅವರ ಕುಕೃತ್ಯಗಳನ್ನು ನಿಲ್ಲಿಸಿದರೆ ಮಾತ್ರ ವಿಶ್ವದಲ್ಲಿ ಶಾಂತಿ ಕಾಣಬಹುದು ಎಂದರು.

ಪೆಹಲ್ಗಾಮ್‌ನಲ್ಲಿ ಹಿಂದುಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ನಡೆಸಿದ್ದನ್ನು ನಾವೆಲ್ಲರು ಗಮನಿಸಿದ್ದೇವೆ. ನಾವು ಅವರಿಗೆ ಸರಿಯಾದ ರೀತಿಯಲ್ಲೇ ಉತ್ತರ ನೀಡಿದ್ದೇವೆ. ನಾವೇನು ಪಾಕಿಸ್ತಾನದ ವಿರುದ್ಧ ಸೇಡಿನ ಯುದ್ಧ ನಡೆಸಿಲ್ಲ, ಬದಲಾಗಿ ನಿಖರವಾಗಿ ಉಗ್ರರನ್ನೇ ಗುರುತಿಸಿ ಯುದ್ಧ ಮಾಡಿದ್ದೇವೆ. ಭಾರತೀಯ ಸಂಸ್ಕೃತಿಗೆ ತಕ್ಕಂತೆ ಸರ್ಕಾರ ಉತ್ತರ ನೀಡಿದೆ. ಅಮಾಯಕರ ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ಭಾರತ ಸರ್ಕಾರ ಮಾಡಿದೆ ಎಂದು ಹೇಳಿದರು.

ಖಂಡಿತವಾಗಿಯೂ ಯುದ್ಧದ ಕ್ರೆಡಿಟ್ ಸೈನಿಕರಿಗೆ ಸಲ್ಲಬೇಕು. ಜತೆಗೆ ುುದ್ಧದ ತಂತ್ರ ರೂಪಿಸಿದ ಕೇಂದ್ರ ಸರ್ಕಾರಕ್ಕೂ ಸಲ್ಲಬೇಕು. ದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ನಾವು ರಾಜಕೀಯ ಮಾಡುತ್ತಿಲ್ಲ, ಕಾಂಗ್ರೆಸ್‌ನವರಿಗೆ ಸಂದೇಶ ಕೊಡುವ ಸ್ಥಾನದಲ್ಲೂ ನಾನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೈಜೋಡಿಸಿ ನಿಲ್ಲಬೇಕು ಎಂದು ಹೇಳಿದರು.

ಅಂದಿನ ಕಾಲಕ್ಕೆ ತಕ್ಕಂತೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೆಲಸ ನಿರ್ವಹಿಸಿದ್ದಾರೆ. ಇಂದಿನ ಕಾಲಕ್ಕೆ ತಕ್ಕಂತೆ ನರೇಂದ್ರ ಮೋದಿ ಅವರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಇಂದಿರಾಗಾಂಧಿ ಹಾಗೂ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net