

ನಾಗಮಂಗಲ: ಗುತ್ತಿಗೆದಾರನಿಗೆ ಮತ ಹಾಕಿದರೆ ಕಾವೇರಿ ಉಳಿಯಲ್ಲ, ಆದ್ದರಿಂದ ಮಂಡ್ಯ ಜಿಲ್ಲೆಯ ಮತದಾರರು ಈ ಬಾರಿ ಪ್ರಜ್ಞಾವಂತರಾಗಿ ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಮೋದಿ ಆಯ್ಕೆ ಮಾಡುವಂತೆ, ಕಾವೇರಿ ರಕ್ಷಣೆಗಾಗಿ ಕುಮಾರಣ್ಣನನ್ನು ಗೆಲ್ಲಿಸಿ ಎಂದು ಸಂಸದ ಪ್ರತಾಪ್‌ಸಿಂಹ ಮನವಿ ಮಾಡಿದರು.
ಪಟ್ಟಣದ ಟಿಬಿ ಬಡಾವಣೆಯ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವರನ್ನಾಗಿಸಬೇಕಿದೆ. ಈ ಚುನಾವಣೆ ಸಿದ್ದರಾಮಯ್ಯ, ಮೋದಿ ಅಥವಾ ರಾಹುಲ್ ಗಾಂಧಿ ನಡುವೆ ನಡೆಯುತ್ತಿರುವ ಚುನಾವಣೆಯಾಗಿರದೆ, ದೇಶದ ಭವಿಷ್ಯದ ಚುನಾವಣೆಯಾಗಿದೆ. ಮೋದಿ ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆದಾಗೆಲ್ಲ ಬರ ತಾಂಡವವಾಡುತ್ತದೆ. ಕೆರೆ ತುಂಬೋದು ಬೇಡ, ಇರೋ ನೀರು ಉಳಿಸಿಕೊಳ್ಳೊಕೆ ಆಗ್ತಿಲ್ಲ. ಕಾಂಗ್ರೆಸ್ ಜತೆ ಸೇರಿರುವ ಪಕ್ಷದಲ್ಲಿಯೇ ಸ್ಟಾಲಿನ್ ಇದ್ದಾರೆ. ಅವರಿಗೆ ಕಾವೇರಿ ವಿಚಾರದಲ್ಲಿ ಕ್ಯಾತೆ ತೆಗೆಯಬೇಡ ಅಂತ ಸಿದ್ದರಾಮಯ್ಯ ಹೇಳಿಲ್ಲ. ಮಂಡ್ಯದವರು ಸ್ವಾಭಿಮಾನಿಗಳು, ಜಾತಿ ಒಡೆಯುವಂತಹ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಡಿ. ಎಚ್‌ಡಿಕೆ ಗೆಲ್ಲಿಸುವ ಮೂಲಕ ಹಳೆ ಮೈಸೂರಿನ ಶಕ್ತಿಯನ್ನು ಪ್ರದರ್ಶಿಸಬೇಕಿದೆ. ಇಟಲಿ ದೇಶದಲ್ಲಿ ಹುಟ್ಟಿದ ಸೋನಿಯಾಗಾಂಧಿ ಚಿಕ್ಕಮಗಳೂರಲ್ಲಿ ನಿಲ್ಲಬಹುದು, ರಾಹುಲ್‌ಗಾಂಧಿ ವೈಯನಾಡುಗೆ ಹೋಗಬಹುದು, ಸಿದ್ದರಾಮಯ್ಯ ಬಾದಾಮಿಗೆ ಹೋಗಬಹುದು. ಆದರೆ ಕಾವೇರಿ ನಾಡಿನ ಮಗ ಕುಮಾರಣ್ಣ ಮಂಡ್ಯದಲ್ಲಿ ನಿಲ್ಲಬಾರದಾ ಎಂದು ಪ್ರಶ್ನಿಸಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಮಾತನಾಡಿ, ನಮ್ಮ ತಂದೆ ಮೂರನೇ ಬಾರಿಗೆ ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರೂ ಅವರ ಆರೋಗ್ಯದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ರಮೇಶ್ ಬಾಬು ಬಂಡಿಸಿದ್ದೇಗೌಡ ಅವರಿಗೆ ರಾಜಕೀಯ ಭವಿಷ್ಯವನ್ನು ಯಾವ ಪಕ್ಷ ನೀಡಿತ್ತು, ಯಾವ ನಾಯಕನ ಜತೆಯಲ್ಲಿ ನಿಂತಿದ್ದರು, ಯಾವ ಪಕ್ಷದ ಕಾರ್ಯಕರ್ತರು ಜತೆಗಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಬೇಕಿದೆ. ಇಂತಹ ಕೀಳುಮಟ್ಟದ ಮಾತನ್ನು ನಿಮ್ಮಿಂದ ನಾನು ನಿರೀಕ್ಷೆ ಮಾಡಿರಲಿಲ್ಲ. ಯಾವುದೋ ಅನುಕಂಪ ಗಿಟ್ಟಿಸಿಕೊಂಡು ಮತ ಹಾಕಿಸಿಕೊಳ್ಳುವ ಅನಿವಾರ್ಯ ನಮಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಬೂತ್‌ಗಳಲ್ಲಿ ಲೀಡ್ ಕೊಡದಿದ್ದರೆ ಮುಖ ನೋಡಲ್ಲ ಎಂದು ದುರಹಂಕಾರದ ಮಾತುಗಳನ್ನಾಡಿರುವ ಸಚಿವರಿಗೆ ಸರಿಯಾದ ಪಾಠ ಕಲಿಸಲು ಕಾಂಗ್ರೆಸ್ ಕಾರ್ಯಕರ್ತರೇ ತಯಾರಾಗಿದ್ದಾರೆ. ಈ ಹಿಂದೆ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಈಗಿನ ಮಂಡ್ಯದ ಮಕ್ಕಳು ಎಲ್ಲಿಗೆ ಹೋಗಿದ್ದರು? ಆಗ ಜಿಲ್ಲೆಯ ರೈತರ ಕಷ್ಟಕ್ಕೆ ಬಂದಿದ್ದು ಕುಮಾರಣ್ಣ ಮಾತ್ರ. ಚಲುವರಾಯಸ್ವಾಮಿಯ ದುರಾಡಳಿತಕ್ಕೆ ಬೇಸತ್ತಿರುವ ಕಾಂಗ್ರೆಸ್‌ನವರೂ ನಮಗೆ ಮತ ಹಾಕಲು ಸಿದ್ಧರಿದ್ದಾರೆ ಎಂದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಮಂಡ್ಯಗೆ ಕುಮಾರಣ್ಣ ಬಂದಿರೋದು ನಮ್ಮ ಅದೃಷ್ಟ. ಕುಮಾರಣ್ಣ ನನ್ನ ಮನೆಗೆ ಬಂದ ತಕ್ಷಣವೇ ನಾನು ಸರೆಂಡರ್ ಆದೆ. ಕುಮಾರಣ್ಣ ಕೇಂದ್ರ ಸಚಿವರಾದ ಮೇಲೆ ಚನ್ನಪಟ್ಟಣದಲ್ಲಿ ನಿಖಿಲ್‌ಗೆ ಅದೃಷ್ಟ ಬರಬಹುದು. ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ. ಸ್ಟಾರ್‌ಚಂದ್ರು ಮಂಡ್ಯಗೆ ಬಂದು ಏನು ಮಾಡೋಕೆ ಆಗುತ್ತೆ. ಸ್ಟಾರ್‌ಚಂದ್ರು ಒಬ್ಬ ಗುತ್ತಿಗೆದಾರ. ಜಿಲ್ಲೆಯಲ್ಲಿ ಹಣ ವರ್ಕೌಟ್ ಆಗಲ್ಲ. ಕುಮಾರಣ್ಣ ಗೆದ್ದರೆ ಮಂಡ್ಯ ಅಭಿವೃದ್ಧಿ ಮಾಡಬಹುದು. ಕೆ.ಆರ್.ಪೇಟೆಯಲ್ಲಿ ನಾವು ಕುಮಾರಣ್ಣನಿಗೆ 1.5 ಲಕ್ಷ ಮತ ಲೀಡ್ ಕೊಡಿಸುತ್ತೇವೆ ಎಂದರು.
ಒಕ್ಕಲಿಗರ ಉಳಿವಿಗಾಗಿ ಎಚ್ಡಿಕೆ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಒಕ್ಕಲಿಗರನ್ನು ಬುಡ ಸಮೇತ ಕೀಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಒಕ್ಕಲಿಗ ಸಮೂಹ ಉಳಿಯಬೇಕಾದರೆ ಕುಮಾರಣ್ಣ ಅವರನ್ನು ಗೆಲ್ಲಿಸಬೇಕಿದೆ. ದೇವೇಗೌಡರು ಇಡೀ ವಿಶ್ವ ಮೆಚ್ಚುವಂತಹ ಮೋದಿಗೆ ಬೆಂಬಲ ನೀಡಿದ್ದಾರೆ. ಸನ್ಮಾರ್ಗದಲ್ಲಿ ನಡೆಯುವವರ ಜತೆ ಕೈಜೋಡಿಸಿದ್ದರಲ್ಲಿ ತಪ್ಪೇನಿದೆ. ಕಳೆದ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಕಿತ್ತಾಟದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಆ ತಪ್ಪು ಲೋಕಸಭೆ ಚುನಾವಣೆಯಲ್ಲಿ ಆಗದಿರಲಿ ಎಂದರು.
ಮಾಜಿ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆಬಾಲು, ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ, ಮುಖಂಡರಾದ ಎಲ್.ಎಸ್.ಚೇತನ್‌ಗೌಡ, ಟಿ.ಕೃಷ್ಣಪ್ಪ, ಜಿಪಂ ಮಾಜಿ ಸದಸ್ಯ ಮುತ್ತಣ್ಣ ಸೇರಿದಂತೆ ಮತ್ತಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುಂಚಿತವಾಗಿ ಪಟ್ಟಣದ ಟಿಬಿ ಬಡಾವಣೆಯಲ್ಲಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರ ನಿವಾಸಕ್ಕೆ ನಿಖಿಲ್‌ಕುಮಾರಸ್ವಾಮಿ ಭೇಟಿ ನೀಡಿ, ಅವರ ಪುತ್ರ ಎಲ್.ಎಸ್.ಚೇತನ್‌ಗೌಡ ಹಾಗೂ ಬಿಜೆಪಿ ಮುಖಂಡರ ಜತೆ ಕೆಲಕಾಲ ಮಾತುಕತೆ ನಡೆಸಿದರು.