ಮೋದಿ ಕರೆಗೆ ಅಪಾರ ಸ್ಪಂದನೆ

22blh1 chanamma vrutt-Web
ಬೈಲಹೊಂಗಲ ಪಟ್ಟಣದಲ್ಲಿ ಭಾನುವಾರ ಬಿಕೋ ಎನ್ನುತ್ತಿದ್ದ ಕಿತ್ತೂರು ರಾಣಿ ಚನ್ನಮ್ಮ ವೃತ್ತ.
Published on

ಬೈಲಹೊಂಗಲ : ಜನತಾ ಕರ್ಫ್ಯೂ ಕರೆಗೆ ಬೈಲಹೊಂಗಲ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪಟ್ಟಣ ಹಾಗೂ ತಾಲೂಕಿನಾದ್ಯಂತ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರೆ, ಪ್ರತಿಯೊಂದು ಬೀದಿಗಳ ನಿವಾಸಿಗಳು ಮನೆ ಬಿಟ್ಟು ಹೊರಗೆ ಬಾರದೆ ಒಳಗುಳಿದರು. ಜನರಿಲ್ಲದೆ ಬೀದಿಗಳು, ರಸ್ತೆಗಳು ಬಿಕೋ ಎಂದವು.

ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಭಣಗುಟ್ಟಿತು. ಸಾರ್ವಜನಿಕ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಆವರಣದಲ್ಲಿ ಹೊರ ರೋಗಿಗಳು ಕಂಡು ಬರಲಿಲ್ಲ. ತುರ್ತು ಚಿಕಿತ್ಸಾ ಘಟಕ ಯಥಾಸ್ಥಿತಿಯಲ್ಲಿತ್ತು. ಒಳ ರೋಗಿಗಳ ಚಿಕಿತ್ಸೆ ನಡೆಯಿತು. ಬೆಳಗ್ಗೆಯಿಂದ ರಾತ್ರಿವರೆಗೆ ಅಂಗಡಿ-ಮುಂಗಟ್ಟು ಬಂದ್ ಮಾಡಿದ್ದರಿಂದ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತ್ತಗೊಂಡಿತ್ತು. ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ಔಷಧಿ ಮಳಿಗೆಗಳು ಮಾತ್ರ ತೆರೆದಿದ್ದವು. ರೈತರು ತಮ್ಮ ಕೃಷಿ ಚಟುವಟಿಕೆಗಳಿಂದ ದೂರ ಉಳಿದಿದ್ದರು. ತಾಲೂಕಿನ ಬೆಳವಡಿ, ಸಂಪಗಾಂವ, ದೊಡವಾಡ, ನೇಸರಗಿ ಭಾಗಗಳಲ್ಲೂ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಯುವಕರ ರಂಪಾಟ: ಒಂದು ಕಡೆ ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಜನರೆಲ್ಲರೂ ಟೊಂಕ ಕಟ್ಟಿ ಬೆಂಬಲಿಸಿದರೆ. ಇನ್ನೊಂದು ಕಡೆ ಪಟ್ಟಣದ ಕೆಲ ಯುವಕರು ಬೆಲ್ಲದ ಕೂಟದಲ್ಲಿ ಮೊಟ್ಟೆಗಳನ್ನು ರಸ್ತೆಯಲ್ಲಿ ಎಸೆದು ರಂಪಾಟ ಮಾಡಿದರು. ಕೆಲವೆಡೆ ಅಕ್ರಮ ಮದ್ಯ ಮಾರಾಟ ನಡೆದದ್ದು ಕಂಡುಬಂತು.

ಕೆಲ ವ್ಯಾಪಾರಸ್ಥರು ಕದ್ದು ಮುಚ್ಚಿ ಹೆಚ್ಚಿನ ಬೆಲೆಗೆ ಸಾರಾಯಿ ಮಾರಾಟ ಮಾಡಿದ್ದು ಆಕ್ರೋಶಕ್ಕೆ ಕಾರಣವಾಯಿತು. ಸಂಜೆ ಜಾಂಗಟೆ, ಘಂಟೆ, ಶಂಖನಾದ, ಚಪ್ಪಾಳೆ ತಟ್ಟುವ ಮೂಲಕ ಬೈಲಹೊಂಗಲ ನಾಗರಿಕರು ಪ್ರಧಾನಿ ಕರೆಯಂತೆ ಕರೊನಾ ವೈರಸ್ ವಿರುದ್ಧ ಸಮರ ಸಾರಿರುವ ವೈದ್ಯರು, ಸಿಬ್ಬಂದಿ, ಅಧಿಕಾರಿಗಳು, ಮಾಧ್ಯಮದವರಿಗೆ ಗೌರವ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net