

ಮೈಸೂರು: ಬಿಜೆಪಿ ನಗರ ಘಟಕದ ವತಿಯಿಂದ ನಗರಪಾಲಿಕೆಯ ಪೌರಕಾರ್ಮಿಕರ ಪಾದಪೂಜೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಆಚರಿಸಲಾಯಿತು.
ಕುರುಬಾರಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಗೌರವವಂದನೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ ಪೌರಕಾರ್ಮಿಕರ ಪಾದಪೂಜೆ ಮಾಡಿದರು.
ನೀರು ಹಾಕಿ ಪಾದ ತೊಳೆದ ಜನಪ್ರತಿನಿಧಿಗಳು, ನಂತರ ಬಟ್ಟೆಯಿಂದ ಒರೆಸಿ, ಪೂಜೆ ಮಾಡಿದರು. ಬಳಿಕ ಹಾರ, ಶಾಲು, ಮೈಸೂರು ಪೇಟ ತೊಡಿಸಿ ಗೌರವಿಸಿದರು. ಈ ವೇಳೆ ಪೌರಕಾರ್ಮಿಕ ಬಂಧುಗಳಿಗೆ ಜೈಕಾರ ಕೂಗಲಾಯಿತು.
ಸಂಸದ ಪ್ರತಾಪಸಿಂಹ ಮಾತನಾಡಿ, ತೋರಿಕೆಗಾಗಿ ಪೌರಕಾರ್ಮಿಕರ ಪಾದಪೂಜೆ ಮಾಡಿಲ್ಲ. 2015 ಮತ್ತು 2016ರಲ್ಲಿ ಸತತ ಎರಡು ವರ್ಷ ಮೈಸೂರು ದೇಶದ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಲು ಪೌರಕಾರ್ಮಿಕರು ಕಾರಣರಾಗಿದ್ದಾರೆ. ಇವರಿಂದ ಮೈಸೂರಿಗೆ ಒಳ್ಳೆಯ ಹೆಸರು ಬಂದಿದೆ ಎಂದು ಹೇಳಿದರು.
ಮೈಸೂರು ನಗರವನ್ನು ಸ್ವಚ್ಛ ಮಾಡುವ ಪೌರಕಾಮಿರ್ಕರ ಪಾದಪೂಜೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಿಸಲಾಗಿದ್ದು, ಇದಕ್ಕೆ ಮೋದಿಯವರೇ ಪ್ರೇರಣೆ ಎಂದು ಹೇಳಿದರು.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ‘ಮಹಾತ್ಮ ಗಾಂಧೀಜಿ ನಮಗೆ ಸ್ವಾತಂತ್ರೃ ತಂದುಕೊಟ್ಟರು, ಸ್ವಚ್ಛ ದೇಶ ಕೊಡೋಣ’ ಎಂದು ಕರೆ ನೀಡಿದ್ದರು. ದೇಶದ ಪ್ರಧಾನಿಯಾದರೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯೋಚನೆ ಮಾಡುವ ಪ್ರಧಾನಿ ನಮ್ಮೆಲ್ಲರ ಹೆಮ್ಮೆ ಎಂದು ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ಪೂಜೆ: ಇದಕ್ಕೂ ಮೊದಲು ಚಾಮುಂಡಿಬೆಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಯಸ್ಸು ವೃದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಮೋದಿ ಅವರ ವಿವಿಧ ಭಾವಚಿತ್ರಗಳನ್ನು ಪ್ರದರ್ಶಿಸಿ, ಈಡುಕಾಯಿ ಒಡೆದರು.
ರಕ್ತದಾನ ಶಿಬಿರ: ಜಿಲ್ಲಾ ವೀರ ಮಡಿವಾಳರ ಜಾಗೃತಿ ಯುವ ಬಳಗದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಸಂಸದ ಪ್ರತಾಪಸಿಂಹ ಶಿಬಿರಕ್ಕೆ ಚಾಲನೆ ನೀಡಿದರು.
ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮುಖಂಡ ಗಿರಿಧರ್ ಇನ್ನಿತರರಿದ್ದರು.