ಗೋಪೂಜಿಸಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ

17Tmk_Modi_BJP
Published on

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನವನ್ನು ಬಿಜೆಪಿ ರೈತ ಮೋರ್ಚಾ ವತಿಯಿಂದ 70 ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಸಿದ್ಧಗಂಗಾ ಮಠದ ಆವರಣದಲ್ಲಿ ಗುರುವಾರ ಐವರು ಪ್ರಗತಿಪರ ರೈತರನ್ನು ರೈತ ಮೋರ್ಚಾ ಸನ್ಮಾನಿಸಿತು. ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃಷಿ ಹಾಗೂ ರೈತಪರವಾಗಿ ಕಾಳಜಿ ವಹಿಸಿರುವ ಪ್ರಧಾನಿ ಮೋದಿ, ಹತ್ತಾರು ಯೋಜನೆಗಳನ್ನು ಈ ವಲಯಕ್ಕೆ ನೀಡುವ ಮೂಲಕ ಕೃಷಿ ಕ್ಷೇತ್ರವನ್ನು ಸದೃಢಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಅವರಿಗೆ ದೇವರು ಹೆಚ್ಚಿನ ಆಯಸ್ಸು, ಆರೋಗ್ಯ ನೀಡಿ ಕಾಪಾಡಲಿ ಎಂದು ಸಿದ್ದಲಿಂಗ ಶ್ರೀಗಳು ಹೇಳಿದರು.

ಸೇವಾ ಸಪ್ತಾಹ: ಸೆ.17ರಿಂದ ಅ.2ರ ಗಾಂಧಿ ಜಯಂತಿವರೆಗೆ ಸೇವಾ ಸಪ್ತಾಹ ಹಮ್ಮಿಕೊಂಡಿದ್ದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿರುವುದಾಗಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ವಿಶ್ವ ಭೂಪಟದಲ್ಲಿ ಭಾರತಕ್ಕೆ ಉನ್ನತ ಸ್ಥಾನ ಕಲ್ಪಿಸಿಕೊಟ್ಟ ಪ್ರಧಾನಿ ಹೆಚ್ಚು ದಕ್ಷತೆ ಹಾಗೂ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಗೋಮಾತೆ ಶಕ್ತಿ ನೀಡಲೆಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು. ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಡಾ.ಎಸ್.ಪರಮೇಶ್, ಜಿಲ್ಲಾ ರೈತಮೋರ್ಚಾದ ಸ್ನೇಕ್ ನಂದೀಶ್, ತರಕಾರಿ ಮಹೇಶ್, ಶಿವಕುಮಾರ್, ಶೋಭಾ, ಪ್ರಿಯಾರಾಜ್, ಜ್ಯೋತಿ ಉಪಸ್ಥಿತರಿದ್ದರು.

ಒಂದು ವಾರ ಸೇವಾ ಕಾರ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನ್ನದಾತನ ಪರವಾಗಿವೆ ಎಂಬುದನ್ನು ದೃಢಪಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗೋಪೂಜೆ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಮಾಡುವ ಮೂಲಕ ಅನ್ನದಾತನ ಋಣ ತೀರಿಸುವ ಕಾರ್ಯ ಇದಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಹೇಳಿದರು. ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ವಾರ ಸೇವಾ ಕಾರ್ಯ ಮುಂದುವರಿಯಲಿದ್ದು, ಸಸಿ ನೆಡುವುದು, ಪ್ರಗತಿಪರ ರೈತರಿಗೆ, ಕೃಷಿ ಕಾರ್ಮಿಕರಿಗೆ ಸನ್ಮಾನ, ಸ್ವಚ್ಛ ಭಾರತ ಅಭಿಯಾನ, ಗೋಪೂಜೆ ಇತ್ಯಾದಿ ನಡೆಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net