

ಮೈಸೂರು: ಗಾಡಿ ಎಳೆಯಲು ಎತ್ತುಗಳು ಬೇಕು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಜೋಡಿ ಎತ್ತುಗಳಂತೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಜತೆಗೆ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ದೇಶದ ಶಕ್ತಿಯುತ ವ್ಯಕ್ತಿ ಯಾರು ಎಂದು ಪ್ರಶ್ನಿಸಿದರೆ ಅಮಿತ್ ಷಾ ಎನ್ನಬಹುದು. ಅವರು ಇಂದಿನ ಮತ್ತೊಬ್ಬ ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಿದ್ದಾರೆ. ಜತೆಗೆ ಚಾಣಕ್ಯನ ಶಕ್ತಿ ಹೊಂದಿದ್ದಾರೆ. ಹಾಗಾಗಿ ಅವರು, ಚಾಣಕ್ಯನೂ ಹೌದು, ಉಕ್ಕಿನ ಮನುಷ್ಯನೂ ಹೌದು ಎಂದರು.
ದೇಶದ ಏಕತೆ, ಸಮಗ್ರತೆ ಹಾಗೂ ಪರಂಪರೆ ಉಳಿಸುವ ನಿಟ್ಟಿನಲ್ಲಿ ಅಮಿತ್ ಷಾ ಅವರು ಹಲವು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವೇದ, ಉಪನಿಷತ್ ಎಲ್ಲವನ್ನೂ ತಿಳಿದುಕೊಂಡಿದ್ದಾರೆ. ಮೈಸೂರಿನ ಅರಮನೆಯಲ್ಲಿ ಪಂಡಿತರಾಗಿದ್ದ ಕೇಶವ ಪಂಡಿತ್ ಅವರಿಂದ ಶಿಕ್ಷಣ ಪಡೆದ ಪರಿಣಾಮವಾಗಿ ಅಮಿತ್ ಷಾ ಅವರು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಹಾಗಾಗಿ, ಮೈಸೂರಿನೊಂದಿಗೆ ಷಾ ಅವರಿಗೂ ನಂಟಿದೆ ಎಂದರು.