ಸದೃಢ ಭಾರತಕ್ಕಾಗಿ ಮತ್ತೊಮ್ಮೆ ಮೋದಿ

4sgr3
ಸಾಗರ ತಾಲೂಕು ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಬೆಂಗಳೂರು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಪ್ರಚಾರ ನಡೆಸಿದರು. ಬಿಬಿಎಂಪಿ ಸದಸ್ಯ ಸೋಮಶೇಖರ್, ಬಿ.ಎಚ್.ರಾಘವೇಂದ್ರ, ಹು.ಭಾ.ಅಶೋಕ್, ಕ್ರಾಂತಿ ಪ್ರಸಾದ್, ರಾಜೇಶ್ ಮಾವಿನಸರ, ರಮೇಶ್ ಪಂಡ್ರಿ, ರಾಜೇಶ್ ಕೇಡಲಸರ, ಎಂ.ನಾಗರಾಜ್ ಇದ್ದರು.
Published on

ಸಾಗರ: ದೇಶ ಮೊದಲು ಎನ್ನುವ ಏಕೈಕ ಪಕ್ಷ ಬಿಜೆಪಿ. ಭಾರತದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಸದೃಢ ಭಾರತ ನಿರ್ಮಾಣ ಮಾಡಲು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು ಎಂದು ಬೆಂಗಳೂರು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೇಳಿದರು.

ತಾಲೂಕಿನ ಮುಂಗರವಳ್ಳಿ, ಕೇಡಲಸರ, ಭೀಮನಕೋಣೆ, ಹೆಗ್ಗೋಡು, ಹೊನ್ನೇಸರ, ಪುರಪ್ಪೆಮನೆ, ವರದಾಮೂಲ, ಕಾನುಮನೆ, ಸಾಗರ ನಗರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಶನಿವಾರ ಪ್ರಚಾರ ನಡೆಸಿ ಮಾತನಾಡಿದರು.
10 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಸ್ವಚ್ಛ, ದಕ್ಷ ಹಾಗೂ ಪ್ರಾಮಾಣಿಕ ಆಡಳಿತವನ್ನು ದೇಶಕ್ಕೆ ನೀಡಿದೆ. ಜಿಡಿಪಿಯಲ್ಲಿ ಗಣನೀಯ ಪ್ರಮಾಣದ ಸಾಧನೆಯಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ನೀಡಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಪೂರ್ಣ ಮಟ್ಟ ಹಾಕಿದೆ. ಹೀಗೆ ಅನೇಕ ಸಾಧನೆಗಳನ್ನು ನರೇಂದ್ರ ಮೋದಿ ಸರ್ಕಾರ ದೇಶಕ್ಕೆ ಕೊಡುಗೆ ನೀಡಿದೆ ಎಂದು ತಿಳಿಸಿದರು.
ಸಂಸದ ರಾಘವೇಂದ್ರ ಅವರು ಸಂಸದರ ನಿಧಿಯನ್ನು ವ್ಯವಸ್ಥಿತವಾಗಿ ಕ್ರಿಯಾಯೋಜನೆ ರೂಪಿಸಿ ಸಂಪೂರ್ಣವಾಗಿ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಮೂಲಕ ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಯಾವುದೇ ಶಾಸಕರಿಗೂ 10 ತಿಂಗಳಲ್ಲಿ ನಯಾಪೈಸೆ ಅನುದಾನ ನೀಡಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ ಮೂರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ರಾಜ್ಯಾದ್ಯಂತ ಭೀಕರ ಬರಗಾಲವಿದ್ದರೂ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಗಮನವನ್ನೇ ನೀಡುತ್ತಿಲ್ಲ. ಅತ್ಯಂತ ಕೆಟ್ಟ ಆಡಳಿತವನ್ನು ಕಾಂಗ್ರೆಸ್ ನೀಡುತ್ತಿದೆ ಎಂದು ದೂರಿದರು.
ಬಿಬಿಎಂಪಿ ಸದಸ್ಯ ಸೋಮಶೇಖರ್, ಬಿಜೆಪಿ ಪ್ರಮುಖರಾದ ಬಿ.ಎಚ್.ರಾಘವೇಂದ್ರ, ಹು.ಭಾ.ಅಶೋಕ್, ಕ್ರಾಂತಿಪ್ರಸಾದ್, ರಾಜೇಶ್ ಮಾವಿನಸರ, ರಮೇಶ್ ಪಂಡ್ರಿ, ರಾಜೇಶ್ ಕೇಡಲಸರ, ಎಂ.ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net