

ಮದ್ದೂರು: ಮುಂದಿನ ವರ್ಷದೊಳಗೆ ತಾಲೂಕಿನಲ್ಲಿ ನೀರಾವರಿಗೆ ಸಂಬಂಧಿಸಿದ ಎಲ್ಲ ನಾಲೆಗಳನ್ನು ಆಧುನಿಕರಣಗೊಳಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ತಾಲೂಕಿನ ತೈಲೂರು ಕೆರೆಯ ಕೋಡಿ ಅಭಿವೃದ್ಧಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ 5 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ಬಜೆಟ್‌ನಲ್ಲಿ ಘೋಷಣೆಯಾಗಿರುವ ನೀರಾವರಿ ಯೋಜನೆಗಳ ಕಾಮಗಾರಿ ಶೀಘ್ರವಾಗಿ ಪ್ರಾರಂಭವಾಗಲಿದ್ದು, ಮುಂದಿನ ವರ್ಷದೊಳಗೆ ನೀರಾವರಿಗೆ ಸಂಬಂಧಿಸಿದ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾಲೂಕಿಗೆ 225 ಕೋಟಿ ರೂ.ಅಧಿಕ ಅನುದಾನ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ನಾನು ತಾಲೂಕಿಗೆ 650 ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು ಹಂತ ಹಂತವಾಗಿ ಅನುದಾನ ಸರ್ಕಾರ ಬಿಡುಗಡೆ ಮಾಡಲಿದೆ ಎಂದರು.
ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಸರ್ಕಾರ ನಮ್ಮದೇ ಇರುವುದರಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲು ಸಹಕಾರಿಯಾಗಲಿದೆ ಎಂದರು.
ಬಜೆಟ್‌ಗೂ ಮೊದಲೇ ತಾಲೂಕಿನ ತೈಲೂರು ಗ್ರಾಮದ ಕೆರೆಯ ಕೋಡಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಗ್ರಾಮಸ್ಥರ ಒತ್ತಾಸೆಯ ಮೇರೆಗೆ ಸರ್ಕಾರದ ಗಮನಕ್ಕೆ ತಂದು ಈಗ ಸುಮಾರು 5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಈ ದಿನ ಚಾಲನೆ ನೀಡಲಾಗಿದೆ ಎಂದರು.
ತಾ.ಪಂ.ಮಾಜಿ ಸದಸ್ಯ ಚಲುವರಾಜು, ಮುಖಂಡರಾದ ತೈಲೂರು ರಘು, ಸ್ವಾಮಿ, ಸತೀಶ್, ಸಿ.ಎ.ಅಣ್ಣಯ್ಯ, ಸಿ.ಆರ್.ರಾಮಲಿಂಗು, ರಾಜು, ಸಂತೋಷ್, ಅಂಕಪ್ಪ, ಪುಟ್ಟಪ್ಪ, ನಾಗರಾಜು, ಗುತ್ತಿಗೆದಾರರಾದ ಗೋವಿಂದ್, ಮುರಳಿ ಇದ್ದರು.