ಆಧುನಿಕತೆಯಿಂದ ಜನಪದ ಸಂಸ್ಕೃತಿಗೆ ಧಕ್ಕೆ

Modernity is a threat to folk culture
Published on

ಕಲಘಟಗಿ: ನಿತ್ಯ ಬದುಕಿನ ನಿದರ್ಶನವಾಗಿದ್ದ ಜನಪದ ಸಂಸ್ಕೃತಿ ಆಧುನಿಕತೆ, ಜಾಗತೀಕರಣ ಬೆಳೆದಂತೆ ಮತ್ತು ಪಾಶ್ಚಾತ್ಯ ಪ್ರಭಾವದಿಂದ ಕೇವಲ ಪ್ರದರ್ಶನ ಮಟ್ಟಕ್ಕೆ ಸಿಮೀತವಾಗಿರುವುದು ದುಃಖದ ವಿಷಯ ಎಂದು ಜನಪದ ತಜ್ಞ ಮಲ್ಲಯ್ಯ ತೋಟಗಂಟಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನುಭವ, ಜ್ಞಾನ, ಭಾವ, ಭಕ್ತಿಯಿಂದ ರೂಪುಗೊಂಡ ಲಾವಣಿ, ಗೀಗಿ, ಬಿಸಿಕಲ್ಲು, ಜೋಗಳ ಹಾಡು, ಹಂತಿ ಪದ, ಗರತಿ ಹಾಡು, ಯಕ್ಷಗಾನ, ಭಜನಾ ಪದ, ನಾಟಕಗಳು ಎಲ್ಲವೂ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಆದರೆ, ಇಂದು ಕಥೆ, ಹೇಳಿಕೆಗಳಿಗೆ ಸೀಮಿತವಾಗಿವೆ ಎಂದರು.

ಕನ್ನಡ ನಾಡಿನ ಇತಿಹಾಸ, ಸಾಂಸ್ಕೃತಿಕ ಪರಂಪರೆ, ಜನಪದ ಮೌಲ್ಯಾದರ್ಶಗಳು ವಿಶಿಷ್ಟ ಮತ್ತು ಅನನ್ಯ. ಜಾನಪದ ಸಂಸ್ಕೃತಿಯ ಜೀವಂತಿಕೆ ಉಳಿಸುವುದು ಇಂದಿನ ಅನಿವಾರ್ಯ. ಪರಂಪರೆಯನ್ನು ಹೊಸ ಪೀಳಿಗೆಗೆ ಪರಿಚಯಿಸಿ, ಸಂರಕ್ಷಣೆ ಮತ್ತು ಸಂವರ್ಧನೆಗೆ ಮುಂದಾಗಬೇಕು ಎಂದರು.

ಮುಕ್ಕಲ್ ಗ್ರಾಮದ ‘ಗ್ರಾಮದೇವಿ’ ಕಲಾತಂಡ ನಾದಗೀತೆಗಳ ಮೂಲಕ ಪುರಾತನ ಲೋಕದ ಸೌಂದರ್ಯ ಸೃಷ್ಟಿಸಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನಗಳು ವಿಶೇಷ ಆಕರ್ಷಣೆ ಆಗಿದ್ದವು. ಜನಪದ ಉತ್ಸವ ನಾಡಿನ ಜನಪದ ಪರಂಪರೆ ಸಾರುವ ಮೇಳಗಳು ಗಮನ ಸೆಳೆದವು.

ಪ್ರಾಚಾರ್ಯ ಡಾ.ಎನ್.ಎಂ. ಸಂಗಮ್ಮನವರ ಅಧ್ಯಕ್ಷತೆ ವಹಿಸಿದ್ದರು. ನೀಲಾ ಹುಚ್ಚಣ್ಣವರ ಮತ್ತು ಸಂಗಡಿಗರು ಶೋಭಾನ ಗೀತೆ ಹಾಡಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕ ಗಂಗಾಧರ ಗೌಡರ ಸ್ವಾಗತಿಸಿದರು. ಪ್ರೊ.ಮಂಜುನಾಥ ಕುರಿ ಅತಿಥಿಗಳ ಪರಿಚಯಿಸಿದರು. ಪ್ರೊ.ಬಿ.ಪಿ. ಮಠದ ಪ್ರಾಸ್ತಾವಿಕ ಮಾತನಾಡಿದರು. ಡಾ.ಎನ್.ಎಸ್. ಕುಸುಗಲ್ಲ ನಿರೂಪಿಸಿದರು. ಡಾ.ವಿಜಯಕುಮಾರಿ ಚಿಲಕವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net