ಬ್ಯಾಂಕ್‌ಗಳ ಭದ್ರತೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ ಅಗತ್ಯ

h20-Police 2
Published on

ಹುಬ್ಬಳ್ಳಿ: ಬ್ಯಾಂಕ್ ಸೇರಿ ಇತರ ಹಣಕಾಸು ಸಂಸ್ಥೆಗಳು ಭದ್ರತೆ ವಿಷಯದಲ್ಲಿ ಮೈ ಮರೆಯಬಾರದು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ತಮ್ಮ ಹಣಕಾಸು ಸಂಸ್ಥೆಗಳಿಗೆ ಭದ್ರತೆ ಒದಗಿಸಿಕೊಳ್ಳಬೇಕು ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸಲಹೆ ನೀಡಿದರು. ಹು-ಧಾ ಪೊಲೀಸ್ ಆಯುಕ್ತಾಲಯ ವತಿಯಿಂದ ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬ್ಯಾಂಕ್‌ಗಳು, ಸೆಕ್ಯೂರಿಟಿ ಏಜೆನ್ಸಿಗಳು, ಕರೆನ್ಸಿ ಚೆಸ್ಟ್ ಏಜೆನ್ಸಿಗಳು, ಲೀಡ್ ಬ್ಯಾಂಕ್‌ಗಳ ಸುರಕ್ಷತಾ ಕ್ರಮಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸರ ಮೂಲಕವೇ ಭದ್ರತೆ ವ್ಯವಸ್ಥೆ ಮಾಡುವುದೆಂದಲ್ಲ. ಆಯಾ ಬ್ಯಾಂಕ್‌ಗಳು ತಮ್ಮ ಸುರಕ್ಷತೆಗೆ ಭದ್ರತೆಯನ್ನು ಏಜೆನ್ಸಿಗಳ ಮೂಲಕ ಒದಗಿಸಿಕೊಳ್ಳಬೇಕು. ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಎಟಿಎಂಗಳಿಗೆ ಹಣ ಹಾಕುವ ಮುನ್ನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ಗಳ ಭದ್ರತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದರಲ್ಲದೆ, ಭದ್ರತಾ ಏಜೆನ್ಸಿಗಳ ಸಭೆಯನ್ನು ಶೀಘ್ರವೇ ಕರೆಯುವಂತೆ ಡಿಸಿಪಿಗಳಿಗೆ ಸೂಚಿಸಿದರು. ಧಾರವಾಡ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಧಾರವಾಡ ಜಿಲ್ಲಾದ್ಯಂತ ಐದು ದರೋಡೆ ಪ್ರಕರಣಗಳು ನಡೆದಿವೆ. ಒಂದಕ್ಕೆ ಚಾರ್ಜ್‌ಶೀಟ್ ಹಾಕಲಾಗಿದೆ. ಉಳಿದ ನಾಲ್ಕು ಪ್ರಕರಣಗಳು ಪತ್ತೆಯಾಗಿಲ್ಲ. ಇದರಲ್ಲಿ ಪೊಲೀಸರ ವೈಫಲ್ಯವೆಂದುಕೊಳ್ಳಬಾರದು ಎಂದರು. ಒಂದು ಪ್ರಕರಣ ಎರಡು ವರ್ಷದ ನಂತರ ದಾಖಲಿಸಲಾಯಿತು. ಹಣಕಾಸು ಸಂಸ್ಥೆಗಳು ಪ್ರಕರಣ ದಾಖಲಿಸಿದರೆ ಸಾಲದು. ತಾವು ಭದ್ರತೆ ವಿಷಯದಲ್ಲಿ ತಾವು ಕೂಡ ಹಲವು ಕ್ರಮ ಕೈಗೊಳ್ಳಬೇಕು. ಇನ್ಮುಂದೆ ಮತ್ತೆ ಇಂಥ ಪ್ರಕರಣಗಳು ನಡೆದರೆ ಬ್ಯಾಂಕಿಂಗ್ ಕ್ಷೇತ್ರದವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಹಾಗಾಬಾರದು ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ. ಮಾತನಾಡಿ, ಭದ್ರತೆ ವಿಷಯದಲ್ಲಿ ಬ್ಯಾಂಕ್‌ಗಳು ಲೋಪವೆಸಗುತ್ತಿಲ್ಲ. ಆದರೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸ್ವಯಂ ಭದ್ರತೆ ಒದಗಿಸಿಕೊಳ್ಳುವತ್ತ ಚಿತ್ತ ಹರಿಸಲಾಗುವುದು ಎಂದು ಅಭಯವಿತ್ತರು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾಂವಿ, ಎಎಸ್‌ಪಿ ನಾರಾಯಣ ಭರಮನಿ ಇತರರು ಇದ್ದರು. ಎಸಿಪಿ ಶಿವಪ್ರಕಾಶ ನಾಯಕ್ ನಿರೂಪಿಸಿದರು.

ದರೋಡೆ ಪ್ರಕರಣ ಭೇದಿಸಲು ಮತ್ತು ಶಿಕ್ಷ ವಿಧಿಸಲು ಕಠಿಣ ಕಾನೂನುಗಳಿವೆ. ಹಣ ಕಳೆದುಕೊಂಡರೂ ಇನ್ಶೂರೆನ್ಸ್ ಮೂಲಕ ವಾಪಸ್ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಪಡೆಯಬಹುದು. ಆದರೆ ನಿರಾಯಸವಾಗಿ ಪ್ರಾಣ ಕಳೆದುಕೊಂಡರೆ ಮರಳಿ ಪಡೆಯಲಾಗದು. ಈ ನಿಟ್ಟಿನಲ್ಲಾದರೂ ಹಣಕಾಸು ಸಂಸ್ಥೆಗಳು ಸ್ವಯಂ ಭದ್ರತೆ ಒದಗಿಸಿಕೊಳ್ಳಬೇಕು. -ಸಿ.ಆರ್. ರವೀಶ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net