ಬೆಳೆಗಳಿಗೆ ಔಷಧ ಸಿಂಪಡಿಸಲು ದ್ರೋಣ್ ಮೊರೆ ಹೋದ ರೈತರು

Published on


ಅಳವಂಡಿ: ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಕೃಷಿ ಕೆಲಸ ಅನಿಶ್ಚಿತತೆಯಿಂದ ಕೂಡಿದ್ದು, ಗ್ರಾಮೀಣ ಭಾಗದ ಕಾರ್ಮಿಕರು ನಗರಗಳತ್ತ ಮುಖ ಮಾಡಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಕಾಡುತ್ತಿದೆ.

ಇನ್ನು ಕಾರ್ಮಿಕರು ಸಿಕ್ಕರೂ, ಕೂಲಿ ದುಪ್ಪಟ್ಟು ಕೇಳುತ್ತಾರೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಬೆಳೆಗಳಿಗೆ ಕ್ರಿಮಿನಾಶಕ ಸಿಪಂಡಿಸಲು ದ್ರೋಣ್ ಮೊರೆ ಹೋಗಿದ್ದಾರೆ.

ಸಮೀಪದ ಬೇಳೂರು ಗ್ರಾಮದ ರೈತ ಮುದೇಗೌಡ ಮಾಲಿಪಾಟೀಲ್, ತಮ್ಮ 12 ಎಕರೆ ಜಮಿನಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಗೆ ಔಷಧ ಸಿಂಪಡಿಸಲು ದ್ರೋಣ್ ಬಳಕೆ ಮಾಡುವ ಮೂಲಕ ಹೊಸ ಪ್ರಯೋಗ ಮುಂದಾಗಿದ್ದಾರೆ. ಒಂದು ಎಕರೆ ಬೆಳೆಗೆ ಔಷಧ ಸಿಂಪಡನೆ ಮಾಡಲು ಕೇವಲ 5ರಿಂದ 6 ನಿಮಿಷ ಸಾಕು. ಸುಮಾರು 1 ತಾಸಿನಲ್ಲಿ 12 ಎಕರೆ ಬೆಳೆಗೆ ಸಿಂಪಡಿಸಲಾಗಿದೆ.

ಕಾರ್ಮಿಕರು ಔಷಧ ಸಿಂಪಡನೆ ಮಾಡುವುದು ಶ್ರಮದ ಕೆಲಸ. ಸಮಯಕ್ಕೆ ಸರಿಯಾಗಿ ಔಷಧ ಸಿಂಪಡನೆ ಮಾಡದಿದ್ದರೆ ಇಳುವರಿ ಕುಂಠಿತಗೊಂಡು ಅಪಾರ ಹಾನಿಯಾಗಲಿದೆ. ಕಾರ್ಮಿಕರು ಔಷಧ ಸಿಂಪಡನೆ ಮಾಡಲು ಬಹಳ ಶ್ರಮ ಪಡಬೇಕು. ದಿನವಿಡೀ ಸುಮಾರು 16ರಿಂದ 20 ಲೀಟರ್ ಕೀಟನಾಶಕವನ್ನು ಬೆನ್ನ ಮೇಲೆ ಹೊತ್ತು ಬೆಳೆಗಳಿಗೆ ಸಿಂಪಡಿಸಬೇಕು. ಬೆಳೆಗಳು ಎತ್ತರ ಇದ್ದಲ್ಲಿ ಇದು ಇನ್ನೂ ಹೆಚ್ಚು ಕಷ್ಟಕರವಾಗಲಿದೆ. ಈ ಎಲ್ಲ ಸಮಸ್ಯೆಗಳಿಗೆ ದ್ರೋಣ್ ಉತ್ತಮ ಪರಿಹಾರವಾಗಿದ್ದು, ರೈತರಿಗೆ ಅನುಕೂಲ ಹಾಗೂ ವರದಾನವಾಗಿದೆ.

ಹುಬ್ಬಳ್ಳಿಯಿಂದ ದ್ರೋಣ್ ಅನ್ನು ಬಾಡಿಗೆಗೆ ತರಿಸಲಾಗಿದ್ದು, ಪ್ರತಿ ಎಕರೆಗೆ 650 ರೂ. ದರ ನಿಗದಿಪಡಿಸಲಾಗಿದೆ. ದ್ರೋಣ್ ಮೂಲಕ ಒಂದು ಬಾರಿ 16 ಲೀ. ಕ್ರಿಮಿನಾಶಕ ತೆಗೆದುಕೊಂಡು ಸುಮಾರು 1 ಎಕರೆ 30 ಗುಂಟೆ ಜಮೀನಿಗೆ ಔಷಧ ಸಿಂಪಡಿಸಬಹುದು. ಅಲ್ಲದೇ, ಹಣ, ಸಮಯ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಯೂ ಬಗೆಹರಿದಂತಾಗುತ್ತದೆ.

ನಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಗೆ ಕರಿಜಿಗಿ ರೋಗ ಬಂದಿತ್ತು. ಮೆಕ್ಕೆಜೋಳ ಬೆಳೆ ಎತ್ತರ ಇದ್ದುದರಿಂದ ಕ್ರಿಮಿನಾಶಕ ಸಿಂಪಡಿಸಲು ತೊಂದರೆಯಾಗಿತ್ತು. ದ್ರೋಣ್ ಮೂಲಕ ಕೆಲವೇ ನಿಮಿಷಗಳಲ್ಲಿ ಕ್ರಿಮಿನಾಶಕ ಸಿಂಪಡನೆ ಮಾಡಲಾಗಿದೆ.ಮುದೇಗೌಡ ಮಾಲಿಪಾಟೀಲ್, ಬೇಳೂರು ರೈತ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net