

ಕೆ.ಆರ್.ನಗರ: ದಾನಿಗಳು ಹಾಗೂ ಹಿರಿಯರು ಸೇರಿ ಕಟ್ಟಿ ಪ್ರೋತ್ಸಾಹಿಸಿ ಬೆಳೆಸಿದ ಟಿ.ಮರಿಯಪ್ಪ ಸ್ಮಾರಕ ವಿದ್ಯಾಸಂಸ್ಥೆಗೆ ಆಧುನಿಕ ಆಯಮ ಕೊಡುವ ಮೂಲಕ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಮಧುವನಹಳ್ಳಿ ಬಡಾವಣೆಯಲ್ಲಿರುವ ಟಿ.ಮರಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆಯಲ್ಲಿ ನೂತನ ಕಟ್ಟಡಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 1954ನೇ ಸಾಲಿನಲ್ಲಿ ನಮ್ಮ ಮಧುವನಹಳ್ಳಿಯ ಸಣ್ಣಪ್ಪಗೌಡರು ನೀಡಿದ ದಾನದ ಜಾಗದಿಂದ ಇಲ್ಲಿ ಒಂದು ಉತ್ತಮ ಶಿಕ್ಷಣ ಸಂಸ್ಥೆ ನಿರ್ಮಾಣವಾಗಿ 71 ವರ್ಷಗಳು ಕಳೆದಿದೆ. ಅದಕ್ಕೆ ಆಧುನಿಕ ಸ್ಪರ್ಷ ನೀಡಿ ಮತ್ತೆ ಮುನ್ನೆಲೆಗೆ ತರಬೇಕಾಗಿದೇ ಎಂದರು.
ಈ ಸಂಸ್ಥೆ ಕಟ್ಟಿ ಬೆಳೆಸಲು ಮಾಡಲು ನಮ್ಮ ಕುರುಬ ಸಮುದಾಯ ನೂರಾರು ಮಂದಿ ದಾನಿಗಳು ಸಹಕರಿಸಿದ್ದಾರೆ. ಅವರು ಸಹಕಾರದಿಂದ ಇಲ್ಲಿ ಉತ್ತಮ ಶೀಕ್ಷಣ ಸಂಸ್ಥೆ ಸ್ಥಾಪನೆಯಾಯಿತು. ಅದು ಹೆಮ್ಮರವಾಗಿ ಬೆಳೆಯಿತಲ್ಲದೆ ಅಂದು ಈ ಸಂಸ್ಥೆಗೆ ಸೇರಲು ವಿದ್ಯಾರ್ಥಿಗಳು ಮತ್ತು ತಮ್ಮ ಮಕ್ಕಳಗಳನ್ನು ಸೇರಿಸಲು ಪಾಲಕರು ಪರದಾಡುವಂತಹ ಹೆಸರು ಈ ಸಂಸ್ಥೆಗೆ ಇತ್ತು. ಆದರೆ ಕಾಲ ಕಳೆದಂತೆ ಆಧುನಿಕ ಕಾಲಕ್ಕೆ ಹೊಂದಿಕೊಳ್ಳದ ಹಿನ್ನೆಲೆಯಲ್ಲಿ ಇಂದು ಸ್ವಲ್ಪ ನಿರ್ಲಕ್ಷ್ಯಕೊಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಹಿಂದುಳಿದವರು, ಅಲ್ಪ ಸಂಖ್ಯಾತರು, ದಲಿತರು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿರುವುದರಿಂದ ಈ ಸಂಸ್ಥೆಯನ್ನು ಬೇರೆಡೆ ಸ್ಥಳಾಂತಿರುಸುವುದು ಬೇಡ ಎಂದು ತೀರ್ಮಾನಿಸಿ, ಮತ್ತೆ ಈ ಜಾಗದಲ್ಲೇ ಆಧುನಿಕತೆಗೆ ಒಪ್ಪಿಕೊಳ್ಳುವಂತೆ ಕಟ್ಟಡ ನಿರ್ಮಿಸಿ ಇಲ್ಲಿ 1ನೇ ತರಗತಿಯಿಂದ ಪದವಿ ವರೆಗೆ ಕೊಡಲಾಗುತ್ತಿರುವ ಶಿಕ್ಷಣವನ್ನು ಉತ್ಕೃಷ್ಟ ಶಿಕ್ಷಣ ಸಿಗುವಂತೆ ಮಾಡುವ ಉದ್ದೇಶ ಇದೆ ಎಂದರು.
ಇಂತಹ ಒಂದು ಸಮಾಜ ಮುಖಿ ಕಾರ್ಯಕ್ಕೆ ಸಮುದಾಯದ ಹಿರಿಯರು, ಪ್ರಮುಖರು, ಉದ್ಯಮಿಗಳು, ದಾನಿಗಳು ಸಹಕರಿಸಲಿದ್ದು, ಈ ಒಂದು ಮಹಾ ಕಾರ್ಯವನ್ನು ನಮ್ಮ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರಿಗೆ ವಹಿಸಲಾಗಿದೆ. ಅದರ ಜತೆಗೆ ನಮ್ಮ ಕಾಗಿನೆಲೆ ಕನಕಪುರ ಮಹಾ ಸಂಸ್ಥಾನದ ಶ್ರೀ ಶಿವನಾಂದಪುರಿ ಸ್ವಾಮಿಗಳ ನೇತೃತ್ವ ವಹಿಸಲಿದ್ದಾರೆ ಎಂದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ನಮ್ಮ ಈ ಶಿಕ್ಷಣ ಸಂಸ್ಥೆ ತಾಲೂಕಿನಲ್ಲೇ ಹೆಸರು ವಾಸಿಯಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ತನ್ನದೇ ಆದ ಅಸ್ಥಿತ್ವ ಹೊಂದಿದೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಅತ್ತುನ್ನತ ಸ್ಥಾನಮಾನ ಗಳಿಸಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಮ್ಮ ಜವಾಬ್ದಾರಿ ಇದೆ ಎಂದರು.
ಈಗಾಗಲೇ ನಮ್ಮ ಸಮುದಾಯದ ಹಿರಿಯ ನಾಯಕರಾದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ನಮ್ಮ ಕುರುಬ ಸಂಘ ಹಾಗೂ ಸಮುದಾಯದವರೆಲ್ಲ ತೀರ್ಮಾನಿಸಿ ಈ ಸಂಸ್ಥೆ ಇಲ್ಲಿಯೇ ಮುಂದುವರೆಯಬೇಕು ಎಂಬ ಉದ್ದೇಶದಿಂದ ನನಗೆ ನೀಡಿದ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಹೇಳಿದರು.
ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಿಪಂ ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಮಾರ್ಚಹಳ್ಳಿ ಶಿವರಾಮ್, ಪುರಸಭಾ ಸದಸ್ಯ ನಟರಾಜ್, ನಿವೃತ್ತ ಡಿಎಚ್‌ಒ ಡಾ.ಮಾಲೇಗೌಡ, ಮುಖಂಡರಾದ ಬೆಟ್ಟೇಗೌಡ, ಆದರ್ಶ, ಕಾಳಿಕುಮಾರ್, ಸಿ.ಪಿ.ಶಂಕರ್ ಸೇರಿದಂತೆ ಕುರುಬರ ಸಂಘದ ನಿರ್ದೇಶಕರು ಹಾಗೂ ಸಂಸ್ಥೆಯ ಶಿಕ್ಷಕರು ಇದ್ದರು.