ಕರಾವಳಿಯಲ್ಲಿ ಸಾಧಾರಣ ಮಳೆ ಸಾಧ್ಯತೆ

mng_21 may male
Published on

ಮಂಗಳೂರು: ಕರಾವಳಿಯಲ್ಲಿ ಗುರುವಾರ ದಿನಪೂರ್ತಿ ಮೋಡ ಕವಿದ ವಾತಾವರಣ ಇದ್ದು, ತಂಪಾದ ವಾತಾವರಣ ಕಂಡುಬಂದಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಜಿಲ್ಲೆಯ ಹಲವಡೆ ಸಾಧಾರಣ ಮಳೆಯಾಗಿದೆ. ಹವಾಮಾಮನ ಇಲಾಖೆ ಮಾಹಿತಿಯಂತೆ ಶುಕ್ರವಾರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಒಂದೆರಡು ಕಡೆ ಮಳೆಯ ಮುನ್ಸೂಚೆನೆ ಇದೆ. ಉತ್ತರ ಕನ್ನಡ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದೆ.

ಜೂನ್ 1ರಿಂದ ರಾಜ್ಯಕ್ಕೆ ಮುಂಗಾರು ಆಗಮನ ನಿರೀಕ್ಷೆ ಇದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಜೂನ್ 1ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಮತ್ತು ಗೋವಾಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಗರಿಷ್ಠ 31.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ನೈಋತ್ಯ ಮಾನ್ಸೂನ್ ಶುಕ್ರವಾರ ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶ, ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉಳಿದ ಭಾಗಗಳು ಹಾಗೂ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮತ್ತಷ್ಟು ಮುಂದುವರಿಯಲಿದ್ದು, ಕರಾವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

*ಅಲ್ಲಲ್ಲಿ ಉತ್ತಮ ಮಳೆ

ದ.ಕ.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ವರೆಗೆ ಮೂಲ್ಕಿಯಲ್ಲಿ ಗರಿಷ್ಠ 42.3 ಮಿಲಿ ಮೀಟರ್ ಮಳೆಯಾಗಿದ್ದು, ದಿನದ ಸರಾಸರಿ ಒಟ್ಟು ಮಳೆ 8.6 ಮಿ.ಮೀ. ದಾಖಲಾಗಿದೆ. ಬೆಳ್ತಂಗಡಿ 4.6 ಮಿ.ಮೀ, ಬಂಟ್ವಾಳ 4.9 ಮಿ.ಮೀ, ಮಂಗಳೂರು 11.2 ಮಿ.ಮೀ, ಪುತ್ತೂರು 8.2 ಮಿ.ಮೀ, ಸುಳ್ಯ 17.3 ಮಿ.ಮೀ, ಮೂಡುಬಿದಿರೆ 14.5 ಮಿ.ಮೀ, ಕಡಬ 4.3 ಮಿ.ಮೀ, ಉಳ್ಳಾಲ 3.7 ಮಿ.ಮೀ. ಮಳೆ ದಾಖಲಾಗಿದೆ.

--------------------

ಇಂದಿನಿಂದ ಮೀನುಗಾರಿಕೆ ನಿಷೇಧ

ಕರಾವಳಿಯ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆಗಳು ನಡೆಯುವುದರಿಂದ ಪ್ರತಿ ವರ್ಷದ ಜೂನ್ 1 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು, ತೊರೆಗಳು, ಅಳಿವೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವುದನ್ನು ಪೂರ್ಣವಾಗಿ ನಿಷೇಧಿಸಲಾಗಿದೆ. ಈ ಅವಧಿಯು ಮೀನಿನ ಜೀವನ ಚಕ್ರದಲ್ಲಿ ಅತಿಮುಖ್ಯವಾದ ಘಟ್ಟವಾಗಿದೆ. ಸ್ಥಳೀಯ ತಳಿಗಳು ಮುಂದಿನ ಪೀಳಿಗೆಗೆ ತಮ್ಮ ಸಂತತಿಯನ್ನು ನೀಡುವ ಸಮಯವಾಗಿರುವುದರಿಂದ ಈ ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರು ಹಾಗೂ ಮೀನುಗಾರರು ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು ತೊರೆಗಳು, ಅಳಿವೆಗಳು ಮತ್ತು ನದಿಗಳಲ್ಲಿ, ಮೀನುಗಳನ್ನು ಈ ಎರಡು ತಿಂಗಳು ಹಿಡಿಯದೇ ಅವುಗಳ ಸಂತಾನ ಅಭಿವೃದ್ದಿಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟು ಮೀನಿನ ಸ್ಥಳೀಯ ತಳಿಗಳ ಸಂರಕ್ಷಣಿಯಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net