

ಬೆಂಗಳೂರು:ಹಲವು ದಿನಗಳಿಂದ ರಾಜ್ಯದಲ್ಲೆಡೆ ಸುರಿಯುತ್ತಿದ್ದ ಮಳೆ, ಸೋಮವಾರದಿಂದ ಇಳಿಮುಖವಾಗಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಈಗಾಗಲೇ ಮುಂಗಾರು ದುರ್ಬಲ ಕಾರಣ ಸಾಧಾರಣ ಮಳೆಯಾಯಿತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನದಲ್ಲಿ ಜು.29ರಿಂದ ಆ. 4ರವರೆಗೆ ಮೋಡ ಕವಿದ ವಾತಾವರಣದೊಂದಿಗೆ ಹಗುರದಿಂದ ಸಾಧಾರಣ ಮಳೆ ಬೀಳಲಿದೆ. ಕರಾವಳಿ ವ್ಯಾಪ್ತಿಯ ಆಯ್ದ ಪ್ರದೇಶಗಳಲ್ಲಿ ಗಂಟೆಗೆ 50-60 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರದಲ್ಲಿ ಹಗುರದಿಂದ ಮಳೆ ಸುರಿಯಲಿದೆ. ಬೆಂಗಳೂರು ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗಲಿದೆ. ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿ.ಸೆ. ಇರಲಿದೆ.